ಬೆಂಗಳೂರಿನ ಮಾಲುಗಳಲ್ಲಿ ಗ್ರಂಥಾಲಯ, ಕಾಲೇಜುಗಳಲ್ಲಿ ಮೇಯರ್ ಮತ್ತಿತರ ಕನಸುಗಳು

ನಾನು ಮೇಯರ್ ಆಗಿದ್ದರೆ...

Crater-like potholes remain on many Bengaluru roads. File pic

ನಿಮ್ಮೂರಿಗೆ ಈ ಹೆಸರು ಯಾಕೆ ಬಂತಂತೆ ಅಂತ ಪ್ರಪಂಚದ ಯಾರನ್ನೇ ಕೇಳಿ… ಒಂದು ಸೊಗಸಾದ ಕತೆ ಹೇಳ್ತಾರೆ. ರೋಚಕ ಘಟನೆ ಹೇಳ್ತಾರೆ. ಆದ್ರೆ ನಮ್ಮೂರಿಗೆ ಮಾತ್ರ ಆ ಭಾಗ್ಯವಿಲ್ಲ. ಅದೆಂತದೋ ಕಾಳು ಬೇಯ್ಸಿರೋ ಅಜ್ಜಿಯ ಕತೆನ ಬೆಂಗಳೂರನ್ನೋ ಬಿನ್ನಾಣಗಿತ್ತಿಗೆ ತಗಲ್ಹಾಕಿದಾರೆ. ನಿಜ ಹೇಳ್ತೀನಿ… ಬೆಡಗು ಅನ್ನೋ ಶಬ್ದದಿಂದಲೇ ನಮ್ಮೂರಿಗೆ ಬೆಂಗಳೂರು ಅನ್ನೋ ಹೆಸರು ಬಂದಿದೆ. ಬೆಡಗಿನೂರು – ಬೆಂಗಳೂರು…  ಇಲ್ಲಿ ಹುಟ್ಟೋಕೆ ಜನ್ಮಾಂತರದ ಪುಣ್ಯಫಲವಿರಬೇಕು.ಅಲ್ಪ-ಸ್ವಲ್ಪ ಪುಣ್ಯ ಮಾಡಿದ್ರೆ ಕೊನೇಪಕ್ಷ ಇಲ್ಲಿನ ನಾಗರಿಕನಾಗಬಹುದು. ಇನ್ನು ಈ ಭಾಗ್ಯದೂರಿನ ನಗರಪಾಲಕ ಅಥವಾ ಮೇಯರ್ ಆಗಲಿಕ್ಕೆ ಪುಣ್ಯ ಮಾತ್ರ ಸಾಲದು.. ಯೋಗ್ಯತೆ, ಅರ್ಹತೆ, ದೂರದೃಷ್ಟಿ, ನಿಸ್ವಾರ್ಥತೆ, ನಾಗರಿಕಪ್ರಜ್ಞೆ ಎಲ್ಲವೂ ಇರಲೇಬೇಕು. ಈ ಎಲ್ಲ ಗುಣಗಳೂ ನನ್ನಲ್ಲೇ ಇವೆಯಲ್ಲ.. ನಾನ್ಯಾಕೆ ಒಂದು ಕೈ ನೋಡ್ಬಾರ್ದು ಅನ್ನೋದು ನನ್ನ ಲೆಕ್ಕಾಚಾರ.


Reliable, useful journalism needs your support.

Over 600 readers have donated over the years, to make articles like this one possible. We need your support to help Citizen Matters sustain and grow. Please do contribute today. Donate now


ಬೆಂಗಳೂರು ಅಂದ್ರೆ ಅವಕಾಶಗಳ ನಗರ. ಜೀವನ ಕಟ್ಟಿಕೊಂಡು ನೆಮ್ಮದಿಯಾಗಿ ಬಾಳಬೇಕು ಅನ್ನುವ ಸ್ವಾಭಿಮಾನಿಗಳಿಗೆ ಹೇಳಿ ಮಾಡಿಸಿದ ಜಾಗವಿದು. ಆದ್ರೆ ಈ ಸ್ವಾಭಿಮಾನಿಗಳು ಸೃಷ್ಟಿಸುವ ಕಸ ನಮ್ಮ ನಗರದ ಕತ್ತು ಹಿಸುಕ್ತಾ ಇದೆ. ಈ ಕಸ ವಾರ್ಡ್ ಮಟ್ಟದಲ್ಲೇ ವಿಲೇವಾರಿ ಮಾಡುವುದು ನನ್ನ ಮೊಟ್ಟ ಮೊದಲ ಆದ್ಯತೆ. ನನ್ನ ಕಾರ್ಪೋರೇಟರ್ ಗಳ ಸಹಾಯ ಪಡ್ಕೊಂಡು, ಕಸದ ಲಾರಿಗಳ ಲಾಬಿಯನ್ನೇ ಉಪಯೋಗಿಕೊಂಡು, ಗುತ್ತಿಗೆದಾರರನ್ನು ಈ ಕೆಲಸಕ್ಕೆ ಆಹ್ವಾನಿಸುತ್ತೇನೆ. ಮೊದಲು ಆಯ್ದ ಕೆಲವಾರ್ಡ್ ಗಳಲ್ಲೇ ಜಾಗ ಗುರುತಿಸಿ ಕಸದಿಂದ ಎಷ್ಟು ಸಾಧ್ಯವೋ ಅಷ್ಟು ಉಪಯೋಗ ಪಡೆಯುವ ಯೋಜನೆ ಆರಂಭಿಸುವುದು ನನ್ನ ಬಹುಕಾಲದ ಕನಸು. ಆದ್ರೆ ನಾನೂ ಒಬ್ಬ ರಾಜಕಾರಣಿ.. ಓಟು ಮತ್ತೆ ನೋಟು ಇಲ್ದೆ ಯಾವ ಆದರ್ಶಗಳೂ ಸಾಕಾರ ಆಗೋದಿಲ್ಲ ಅಂತ ಗೊತ್ತಿದೆ ನನಗೆ. ಕಸವನ್ನು ಸರಿಯಾಗಿ ವಿಲೇವಾರಿ ಮಾಡಿದ ಪಕ್ಷವನ್ನು ಜನ ಕೈ ಬಿಡಲ್ಲ ಅನ್ನೋದು ನನ್ನ ದೃಢವಾದ ನಂಬಿಕೆ.

ಭೌಗೋಳಿಕವಾಗಿ ನೋಡಿದ್ರೆ ನಮ್ಮೂರಿನಷ್ಟು ಅದ್ಭುತವಾದ ಜಾಗ ಇನ್ನೊಂದಿಲ್ಲ. ಕಾಲಕಾಲಕ್ಕೆ ಮಳೆ, ಯಾವಾಗ್ಲೂ ಬೀಸೋ ತಂಗಾಳಿ, ಹಿತವಾದ ಬಿಸಿಲು. ಅದಕ್ಕೇ ಅಲ್ವೇ ಇಲ್ಲಿ ಅಷ್ಟೊಂದು ಉದ್ಯಾನಗಳು. ಖಾಲಿ ಸೈಟ್ ಗಳು, ಮೆಟ್ರೋ ಮಾರ್ಗದ ಕೆಳಗಿನ ಜಾಗ , ಡಿವೈಡರ್ ಗಳು ಇಲ್ಲೆಲ್ಲ ತುಂಬ ಆರೈಕೆ ಬೇಕಾಗೋ ಯಾವುದೋ ಫಾರಿನ್ ಹೂಗಿಡಗಳ ಬದಲು ಸುಲಭವಾಗಿ ಬೆಳೆಯೋ ದಾಸವಾಳ, ಸದಾಪುಷ್ಪ , ಕಣಗಿಲೆ ಇಂಥ ಗಿಡಗಳನ್ನು ಹಾಕಬೇಕು ಅನ್ನೋ ಭಾವನೆ ನಂದು. ಒಂದು ಸಾರಿ ನೆಟ್ಟು ಎರಡು ದಿನ ನೋಡ್ಕೊಂಡ್ರೆ ವರ್ಷಾನುಗಟ್ಟಲೆ ಅರಳ್ತಾವೆ ಈ ಗಿಡಗಳು. ಈ ಕೆಲಸಕ್ಕೆ ಆ ಏರಿಯಾದ ವ್ಯಾಪಾರಿಗಳನ್ನೇ ಹಿಡಿಯೋದು ಒಳ್ಳೇದು. ಅವರ ಜಾಹೀರಾತಿಗೆ ಒಂದು ಅಡಿ ಜಾಗ ಕೊಟ್ರಾಯ್ತು..

ನಗರದ ಪಿಯುಸಿ ವಿದ್ಯಾರ್ಥಿಗಳನ್ನೆಲ್ಲ ಒಮ್ಮೆ ಭೇಟಿಯಾಗ್ಬೇಕು ಅನ್ನೋದು ನನ್ನ ಇನ್ನೊಂದು ಕನಸು. ಈ ದರಿದ್ರ ನಾಯಕರನ್ನು ನೋಡ್ತಾ ಬೆಳೀತಿರೋ ನಮ್ಮ ಮಕ್ಕಳಿಗೆ ನಗರದ ಭವಿಷ್ಯದ ಬಗ್ಗೆ ನಿರಾಸೆಯಾಗ್ತಿದೆ. ಪ್ರತೀ ಶನಿವಾರ ಎರಡು ಕಾಲೇಜುಗಳಿಗೆ ಭೇಟಿ ಕೊಡ್ಬೇಕು [ಗವರ್ನ್ಮೆಂಟು-ಪ್ರೈವೇಟು] ಅಂದ್ಕೊಂಡಿದೀನಿ. ಅಲ್ಲಿಗೆ ಹೋಗಿ ನಮ್ಮ ಸರಕಾರೀ ವ್ಯವಸ್ಥೆ ಬಗ್ಗೆ ವಿವರಿಸಿ, ನಗರ ನಿರ್ವಹಣೆಯ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸ್ಬೇಕು. ನಮ್ಮ ಸಮಸ್ಯೆಗಳ ಸಮಾಧಾನ ನಮ್ಮ ಮನೆಗಳಿಂದ ಶುರು ಆಗ್ಬೇಕು, ಟ್ರಾಫಿಕ್ ರೂಲ್ಸು, ಸ್ವಚ್ಛತೆ, ಮಳೆನೀರು ಸಂಗ್ರಹ ಇವನ್ನೆಲ್ಲ ಪಾಲಿಸಿ ಅಂತ ಹೇಳ್ಬೇಕು. ಪ್ರತೀ ಕಾಲೇಜಿನಿಂದ ಇಬ್ಬರು ಮಕ್ಕ್ಳು ತಿಂಗಳಿಗೊಮ್ಮೆ ಪಾಲಿಕೆ ಸಭೆಯಲ್ಲಿ ಭಾಗವಹಿಸಬಹುದು ಅಂತ ಆಮಿಷನೂ ಒಡ್ತೀನಿ. ಇಲ್ಲಿ ನನ್ನ ಸ್ವಾರ್ಥನೂ ಇದೆ.. ಇವರೇ ಅಲ್ವೆ ನಮ್ಮ ಮುಂದಿನ ಮತದಾರರು…!!

ಈ ರಸ್ತೆ ಗುಂಡಿಗಳಿಗೆ ಏನಾದ್ರೂ ಮಾಡ್ಲೇಬೇಕ್ರೀ… ಈ ಕೆಲಸ ನನ್ನ ೧ ವರ್ಷದ ಅವಧಿಯಲ್ಲಿ ಆಗೋದಲ್ಲ. ಅದಕ್ಕೆ ಎಲ್ಲ ರಸ್ತೆಗಳ ಕೇಸ್ ಹಿಸ್ಟರಿ ಅಂತ ಒಂದು ರಿಸರ್ಚ್ ಶುರು ಮಾಡಿಸ್ತೀನಿ. ಆಗ ಸರಕಾರದ ದುಡ್ಡು ನುಂಗೋ ಗುತ್ತಿಗೆದಾರರನ್ನು ಹಿಡೀಬಹುದು ಅಂತ ನನ್ನ ಲೆಕ್ಕಾಚಾರ. ಕಾರ್ಪೋರೇಟರ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ್ರೆ ದುಡ್ಡು ಸೋರಿಕೆ ನಿಲ್ಲಿಸಬಹುದು. ರಸ್ತೆ ಗುಣಮಟ್ಟವನ್ನೂ ಹೆಚ್ಚಿಸಬಹುದು. ನಮ್ಮವರು ಕ್ಷಣಿಕ ಲಾಭ ನೋಡ್ತಾರೆ ಸಾರ್.. ಒಳ್ಳೆ ರಸ್ತೆ ಮಾಡಿಸಿದರೆ ಮತ್ತೆ ಮತ್ತೆ ನಮ್ ಪಾರ್ಟಿನೇ ಗೆಲ್ಲಬಹುದು.. ಅಧಿಕಾರ ಶಾಶ್ವತವಾಗಿರುತ್ತದೆ ಅನ್ನೋ ತಿಳುವಳಿಕೆ ಮೂಡಿಸಿದರೆ ಎಲ್ಲರಿಗೂ ಲಾಭ ಅಲ್ವೇ? ಜೊತೆಗೆ ರಸ್ತೆ ನಿರ್ವಹಣೆಯನ್ನು ಖಾಸಗಿಯವರಿಗೆ ಕೊಟ್ರೆ ತಲೆನೋವಿಲ್ಲ ಅಂತ ನನ್ನ ಅಭಿಪ್ರಾಯ. ಕೌನ್ಸಿಲ್ ನಲ್ಲಿ ಈ ಬಗ್ಗೆ ಚರ್ಚಿಸಿ ನೋಡುತ್ತೇನೆ. ಖಾಸಗಿಯವರಿದ್ದಲ್ಲಿ ಸ್ಪರ್ಧೆ ಏರ್ಪಡುತ್ತದೆ. ಜಡ್ಡುಗಟ್ಟಿರುವ ಸರಕಾರೀ ವ್ಯವಸ್ಥೆ ಎಚ್ಚೆತ್ತುಕೊಳ್ಳಬಹುದು.

ನನ್ನೂರಲ್ಲಿ ಎಲ್ಲ ಕಡೆ ಗ್ರಂಥಾಲಯಗಳು ಇರಬೇಕು. ಎಲ್ಲ ಸುಪರ್ ಮಾರ್ಕೆಟ್, ಮಾಲ್ ಗಳಲ್ಲಿ  ಕನಿಷ್ಠಪಕ್ಷ ೫ ಚದರ ಜಾಗ ಗ್ರಂಥಾಲಯಕ್ಕೆ ಇರಲೇಬೇಕು. ಇದನ್ನು ಅವರೇ ನಿಭಾಯಿಸಬೇಕು. ಇಲ್ಲಿ ಅರ್ಧದಷ್ಟು ಕನ್ನಡ ಪುಸ್ತಕಗಳನ್ನಿಡಬೇಕು. ಅಲ್ಲಿ ಕೂತು ಹರಟೆ ಹೊಡೆಯುವ , ಕಾಲಹರಣ ಮಾಡುವ ಯುವಜನರು, ಹೆಂಡತಿ ಶಾಪಿಂಗ್ ಮಾಡುತ್ತಿದ್ದರೆ ಕಾಯುತ್ತ ಇರುವ ಗಂಡಂದಿರು , ಗರ್ಲ್-ಬಾಯ್ ಫ್ರೆಂಡ್ ಗೆ ಕಾಯ್ತಾ ಇರುವವರು, ಪುಸ್ತಕ ಓದುವ ಹವ್ಯಾಸ ಬೆಳೆಸ್ಕೊಳ್ಳಬಹುದು. ಬೆಂಗಳೂರಿನವರು ವಿದ್ಯಾವಂತರು. ಅವರಿಗೆ ಇದು ಬೇಕೇ ಬೇಕು.

ಬಸ್ ಸ್ಟಾಂಡ್-ಗಳಲ್ಲಿ ಅಳವಡಿಸಿರೋ ಟಿವಿ ಗಳಲ್ಲಿ ನಮ್ಮ ರಾಜ್ಯದ ಸಾಧಕರ ಬಗ್ಗೆ ಹಾಕಬೇಕು ಅನ್ನೋ ಕನಸು ನನ್ನದು. ಸಾಧಕರು ಅಂದ್ರೆ ಸಾಹಿತಿಗಳಲ್ಲರೀ… ಒಬ್ಬ ಒಳ್ಳೇ ರೈತ, ವಿಶಿಷ್ಟ ವಿದ್ಯಾರ್ಥಿ, ನಿಷ್ಟಾವಂತ ಪೌರಕಾರ್ಮಿಕ, ಸೊಗಸಾಗಿ ಕನ್ನಡ ಮಾತಾಡುವ ಭಾಷಣಕಾರ, ಸಹೃದಯ ಶಿಕ್ಷಕ, ಕಳಕಳಿಯಿರುವ ವೈದ್ಯ ಇವರೆಲ್ಲ ನಿಜವಾದ ಸಾಧಕರು. ಇವರ ಬಗ್ಗೆ ಜನ ತಿಳ್ಕೊಳ್ಳಬೇಕು. ಇವರ ಥರ ಆಗಲಿಕ್ಕೆ ಪ್ರಯತ್ನ ಮಾಡಬೇಕು. ಈ ಕೆಲಸವನ್ನು ನಮ್ಮ ವಿದ್ಯಾರ್ಥಿಗಳಿಗೆ ವಹಿಸ್ತೇನೆ. ಒಂದು ವೆಬ್ಸೈಟ್ ಮಾಡಿಸುತ್ತೇನೆ. ತಮ್ಮ ಸುತ್ತಲೂ ಕಾಣುವ ಇಂಥ ಸಾಧಕರ ವಿಡಿಯೋ ಮಾಡಿ ಅದರಲ್ಲಿ  ತಮ್ಮ ಕಾಲೇಜಿನ ಪ್ರಿನ್ಸಿಪಾಲರ ಜೊತೆ ಲಾಗಿನ್ ಆಗಿ ವಿಡಿಯೋ ಹಾಕಬೇಕು. ಟಿವಿ ನಲ್ಲಿ ಸಾಮಾನ್ಯರೂ ಬರಬೇಕ್ರೀ..

ಇನ್ನೊಂದ್ ವಿಷ್ಯ ಏನಪ್ಪಾ ಅಂದ್ರೆ ನಮ್ಮೂರಲ್ಲಿ ಚರಂಡಿ ವ್ಯವಸ್ಥೆ ತಕ್ಕಮಟ್ಟಿಗೆ ಇದೆ. ಆದ್ರೆ ಅದು ಕಟ್ಕೊಂಡಿರುತ್ತದೆ. ರಸ್ತೆಯಿಂದ ಚರಂಡಿಗೆ ಮಳೆನೀರು ಹೋಗುವ ತೂಬುಗಳಲ್ಲಿ ಪ್ಲಾಸ್ಟಿಕ್ ಸೇರ್ಕೊಂಡು ರಸ್ತೆನೇ ನದಿಯಾಗುತ್ತದೆ. ಇದರ ನಿವಾರಣೆಗೆ ನನ್ನ ಪ್ರಯತ್ನ ಮಾಡುತ್ತೇನೆ. ಎಪ್ರಿಲ್-ಮೇ ತಿಂಗಳಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ಆರಂಭಿಸುತ್ತೇನೆ. ಇನ್ನು ಈ ರಾಜಕಾಲುವೆದು ಬೆಟ್ಟದಂಥಾ ಸಮಸ್ಯೆ. ಇದರ ತೆರವಿಗೆ ಹಂತಹಂತವಾಗಿ ಕ್ರಮ ಆರಂಭಿಸಿದರೆ ಸಂಪೂರ್ಣ ನಿವಾರಣೆ ಮಾಡಬಹುದು.

ಕೆರೆ ಪುನಶ್ಚೇತನ ನನಗಿರೋ ಇನ್ನೊಂದು ಹೆಬ್ಬಯಕೆ. ಕಾರ್ಪೋರೇಟರ್ ಗಳಿಗೆ ಹೀಗೊಂದು ಸ್ಪರ್ಧೆ ಏರ್ಪಡಿಸಬೇಕು. ಮುಂದಿನ ಚುನಾವಣೆಗೆ ಟಿಕೆಟ್ ಸಿಗೋಕೆ ಕನಿಷ್ಠ ಒಂದು ಉದ್ಯಾನ, ಒಂದು ಕೆರೆಯನ್ನಾದರೂ ಅಭಿವೃದ್ಧಿ ಮಾಡಿರಲೇಬೇಕು ಅನ್ನುವ ನಿಯಮ ತರಬೇಕು. ಲೇಕ್ ವ್ಯೂ ಅಂತ ಹೆಸರು ಹಾಕ್ಕೊಂಡು ಅಪಾರ್ಟ್ಮೆಂಟ್ ಕಟ್ಟಿಸ್ತಾರಲ್ಲ ಅಂಥ ಕಂಪನಿಗಳ ಹೆಗಲಿಗೆ ಕೆರೆ ರಕ್ಷಣೆಯ ಜವಾಬ್ದಾರಿಯನ್ನು ಕಡ್ಡಾಯವಾಗಿ ಹೊರಿಸುತ್ತೇನೆ. ಕೆರೆ ಶುಭ್ರವಾಗಿದ್ರೆ ಯಾವ ಪಕ್ಷ ಅಥವಾ ಯಾವ ಜನ ಇಷ್ಟಪಡಲ್ಲ ಹೇಳಿ. ಆರಂಭದಲ್ಲಿ ವಿರೋಧ ಎದುರಾಗಬಹುದು . ಆದರೆ ಕಟ್ಟುನಿಟ್ಟಾದ ನಿಯಮ ತಂದ್ರೆ ಖಂಡಿತ ಎಲ್ಲರೂ ಪಾಲಿಸ್ತಾರೆ. ನಮ್ಮ ಬೆಂಗಳೂರಿಗೆ ಕಪ್ಪು ಮಚ್ಚೆಯಂತಿರುವ ಬೆಳ್ಳಂದೂರುಕೆರೆಯ ಸಮಸ್ಯೆಯನ್ನು ಬಗೆಹರಿಸಲು ಅಲ್ಲಿನ ಪ್ರದೇಶದ ಕಾರ್ಖಾನೆಗಳ ಮಾಲೀಕರ ಸಭೆ ಕರೆಯುತ್ತೇನೆ. ಸರಕಾರದ-ಕಾರ್ಖಾನೆಗಳ ಸಹಭಾಗಿತ್ವದಲ್ಲಿ ಕೊಳಚೆ ಶುದ್ಧೀಕರಣ ಘಟಕ ಸ್ಥಾಪಿಸುವ ಪ್ರಸ್ತಾವಕ್ಕೆ ಅವರನ್ನು ಒಪ್ಪಿಸುತ್ತೇನೆ. ಕಾರ್ಪೋರೇಟರ್ ಮತ್ತು ಶಾಸಕರು ಮನಸ್ಸು ಮಾಡಿದರೆ ಯಾವ ಕೆಲಸ ಅಸಾಧ್ಯ ಹೇಳಿ?

ನಮ್ಮ ಸಿಟಿ ಬಸ್ ಸರ್ವಿಸ್ ನಲ್ಲಿ ಡೀಸೆಲ್ ಗಾಡಿಗಳ ಬದಲಿಗೆ ಸಿ ಎನ್ ಜಿ ವಾಹನಗಳನ್ನು ಉಪಯೋಗಿಸಿದರೆ ಮಾಲಿನ್ಯ ಕಡಿಮೆಯಾಗುತ್ತದೆ. ಈ ಪ್ರಸ್ತಾವವನ್ನು ಜಾರಿಗೊಳಿಸಲು ಶತಾಯ ಗತಾಯ ಪ್ರಯತ್ನಿಸುತ್ತೇನೆ.ಹಾಗೆಯೇ ಸಿಟಿ ಬಸ್ ವ್ಯವಸ್ಥೆಯಲ್ಲಿ  ಕೆಲವು ಮಾರ್ಗಗಳಲ್ಲಿ ಮಿನಿ ಬಸ್ಸುಗಳನ್ನು ಹಾಕಬೇಕೆಂದು ಸಲಹೆ ಕೊಡುತ್ತೇನೆ. ಚಿಕ್ಕ ರಸ್ತೆಗಳಲ್ಲಿ ಚಿಕ್ಕ ಬಸ್ಸುಗಳಿದ್ದರೆ ಒಳ್ಳೆಯದು. ಬರೀ ನಾಲ್ಕು ಜನರಿಗೋಸ್ಕರ ದೊಡ್ಡ ಬಸ್ಸು ವ್ಯರ್ಥವಲ್ಲವೇ? ಏರ್ ಪೊರ್ಟ್ ಬಸ್ ಗಳಲ್ಲಿ ಯಾವಾಗ್ಲೂ ಜನ ಇರುವುದಿಲ್ಲ. ಆದ್ರೆ ದೊಡ್ಡ ಬಸ್ಸು ಅಡ್ಡಾಡುತ್ತದೆ. ಇದರ ಬಗ್ಗೆ ಗಮನ ಕೊಡಿ ಅಂತ ನನ್ನ ಸಲಹೆ.

ಬೀದಿನಾಯಿಗಳ ನಿಯಂತ್ರಣ ಇನ್ನೊಂದು ವಿಷಯ. ನಾಯಿಗಳ ಸಂತಾನಹರಣಕ್ಕೆ ಹೆಚ್ಚು ಒತ್ತು ಕೊಡುವ ಕಾರ್ಯಕ್ರಮ ಹಾಕಿಕೊಳ್ಳುತ್ತೇನೆ. ಕಸದ ಸಮಸ್ಯೆ ಕಮ್ಮಿ ಆದ್ರೆ ನಾಯಿಗಳೂ ನಿಯಂತ್ರಣಕ್ಕೆ ಬರುತ್ತವೆ.

ನಾನೇನಾದ್ರೂ ಮೇಯರ್ ಆದ್ರೆ ನಾನು ಭಾಗವಹಿಸೋ ಸಮಾರಂಭದಲ್ಲಿ ಪ್ಲಾಸ್ಟಿಕ್ ಉಪಯೋಗ ಅತಿ ಕಡಿಮೆ ಇರಬೇಕು. ನಿರ್ದಾಕ್ಷಿಣ್ಯವಾಗಿ ಇದನ್ನು ಜಾರಿಗೆ ಮಾಡ್ತೇನೆ.

ಎಲ್ಲಕ್ಕಿಂತ ಮುಖ್ಯ ಅಂದ್ರೆ ನಮ್ಮ ಕಾರ್ಪೋರೇಟರ್ ಗಳಿಗೆ ನೈತಿಕ -ಸಾಮಾಜಿಕ ಪ್ರಜ್ಞೆ ತರಿಸುವಂಥ ಕಾರ್ಯಕ್ರಮಗಳಿಗೆ ಒತ್ತು ಕೊಡುತ್ತೇನೆ. ನನ್ನ ವಾರ್ಡ್ ನಲ್ಲಿ ಮೊದಲು ನನ್ನ ಪ್ರಯೋಗಗಳನ್ನೆಲ್ಲ ಆರಂಭಿಸುತ್ತೇನೆ. ನಾನೇ ಮಾಡಿ ತೋರ್ಸಿದ್ರೆ ಕಾಲಕ್ರಮೇಣ ಕೆಲವರು ತಿದ್ದಿಕೋಬಹುದು ಅನ್ನೋದು ನನ್ನ ದೃಢನಂಬಿಕೆ. ಸರಕಾರೀ ಕಚೇರಿಗಳಲ್ಲಿ ನಮ್ಮ ಪ್ರಯೋಗಗಳನ್ನು ಮೊದಲು ಜಾರಿಗೆ ತರಬೇಕು. ನಮ್ಮ ಕಚೇರಿಗಳು ಸೋಮಾರಿಗಳ, ಭ್ರಷ್ಠರ ಖಾಯಂ ನಿವಾಸಗಳು ಅನ್ನೋ ಧೋರಣೆಯನ್ನು ಬದಲಿಸಬೇಕು. ನಾನು ಮೇಯರ್ ಆದರೆ ಈ ವ್ಯವಸ್ಥೆಯಲ್ಲಿ ನನ್ನ ಹೆಜ್ಜೆಗುರುತನ್ನು ಮೂಡಿಸಿ ನಿರ್ಗಮಿಸುವುದೇ ನನ್ನ ಹೆಬ್ಬಯಕೆ.

Note: This is the winner entry in the contest ‘If I were the Mayor’ in Kannada category.


WE WANT TO THANK YOU
for reading Citizen Matters, of course. It would be fantastic to be able to thank you for supporting us as well. For 12 years we have strived to bring you trustworthy and useful information about our cities. Because informed citizens are crucial to make a better city. Support Citizen Matters today.

DONATE NOWAbout Veda Athavale 1 Article
The author has not yet added any personal or biographical info to her or his author profile.