
Translated by Umeshbabu Pillegowda
ಸಿ ಆರ್ ಪಿ ಸಿ ಸೆಕ್ಷನ್ ೧೪೪ರ ಅಡಿಯಲ್ಲಿ ಕರ್ನಾಟಕ ಸರ್ಕಾರ ಬೆಂಗಳೂರು ಮತ್ತು ರಾಜ್ಯದ ಕೆಲವು ಭಾಗಗಳಲ್ಲಿ ನಿಷೇದಾಜ್ಞೆ ವಿಧಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆ ಸರ್ಕಾರವು ಈ ಕ್ರಮ ಕೈಗೊಂಡಿದೆ. ನಿಷೇದಾಜ್ಞೆ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಆದರೆ ಪ್ರತಿಭಟನೆಗಳ ಬಗ್ಗೆ ನಮ್ಮ ಕಾನೂನುಗಳು ಏನು ಹೇಳುತ್ತವೆ? ನೀವು ಪ್ರತಿಭಟನೆ ನಡೆಸಲು ಬಯಸಿದರೆ, ನಿಮಗೆ ಯಾವ ಹಕ್ಕುಗಳಿವೆ ಮತ್ತು ನೀವು ಯಾವ ಅನುಮತಿಗಳನ್ನು ತೆಗೆದುಕೊಳ್ಳಬೇಕು?
ಪ್ರತಿಭಟಿಸುವ ಹಕ್ಕು ನಾಗರಿಕರಿಗೆ ಇದೆಯೇ?
‘ಪ್ರತಿಭಟನೆ‘ ಎಂಬ ಪದವನ್ನು ಭಾರತೀಯ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ. ಆದರೆ ಪ್ರತಿಭಟಿಸುವ ಹಕ್ಕು ಸಂವಿಧಾನದ 19 (1) ನೇ ವಿಧಿಯಿಂದ ಬಂದಿದೆ, ಅದು ನಾಗರಿಕರಿಗೆ :
- ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
- ಶಸ್ತ್ರಾಸ್ತ್ರಗಳಿಲ್ಲದೆ ಶಾಂತಿಯುತ ಸಭೆ
- ಸಂಘಟನೆಗಳನ್ನು ಸ್ಥಾಪಿಸುವ ಹಕ್ಕಿದೆ ಎಂದು ಹೇಳುತ್ತದೆ
ಆ ಅರ್ಥದಲ್ಲಿ, ಪ್ರತಿಭಟನೆಗಳು ಶಾಂತಿಯುತ ಸಭೆಯ ಒಂದು ರೂಪವಾಗಿದೆ, ಅಲ್ಲಿ ಜನರು ತಮ್ಮ ಸಂಬಂಧಿತ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ವ್ಯಕ್ತಪಡಿಸುತ್ತಾರೆ.
ಆದಾಗಿಯೂ, ಸಂವಿಧಾನದ 19 ನೇ ವಿಧಿಯ (2) (3) (4) ರ ಅಡಿಯಲ್ಲಿ ಮುಂದಿನ ಷರತ್ತುಗಳು ಈ ಹಕ್ಕುಗಳನ್ನು ನಿರ್ಬಂಧಿಸುತ್ತವೆ, “ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗೆ ಸ್ನೇಹ ಸಂಬಂಧಗಳನ್ನು ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಅಥವಾ ನೈತಿಕತೆಯನ್ನು ಕಾಪಾಡಿಕೊಳ್ಳುವುದು, ನ್ಯಾಯಾಂಗ ನಿಂದನೆ, ಮಾನಹಾನಿ ಅಥವಾ ಅಪರಾಧಕ್ಕೆ ಪ್ರಚೋದನೆ ”. ‘ಸಾರ್ವಜನಿಕ ಸುವ್ಯವಸ್ಥೆ ಕಾಪಾಡಿಕೊಳ್ಳಲು’ ಹಲವಾರು ಪ್ರತಿಭಟನೆಗಳಿಗೆ ಬೆಂಗಳೂರಿನಲ್ಲಿ ಅನುಮತಿ ನಿರಾಕರಿಸಲಾಗಿದೆ. ಕಾನೂನು ಬಾಹಿರವಾಗಿ ಗುಂಪು ಸೇರುವುದನ್ನು 19(1) ನೇ ವಿಧಿಯ ಅಡಿಯಲ್ಲಿ ಮಾನ್ಯ ಮಾಡಲಾಗುವುದಿಲ್ಲ.
ಇದಲ್ಲದೆ, ರಾಜ್ಯ ಸರ್ಕಾರಗಳು ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಪ್ರತ್ಯೇಕ ಕಾನೂನುಗಳನ್ನು ಮಾಡಬಹುದು, ಮತ್ತು ಈ ಕಾನೂನುಗಳು ನಾಗರಿಕರ ಪ್ರತಿಭಟನೆಯ ಹಕ್ಕನ್ನು ನಿಯಂತ್ರಿಸಬಹುದು. ಕರ್ನಾಟಕ ಪೊಲೀಸ್ ಅಧಿನಿಯಮ,1963, ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಬಗ್ಗೆ ಹೇಳುತ್ತದೆ.
ಪ್ರತಿಭಟನೆ ನಡೆಸಲು ನಿಮಗೆ ಯಾವ ಅನುಮತಿಗಳು ಬೇಕು?
ಕಾನೂನುಬದ್ಧ ಪ್ರತಿಭಟನೆ ನಡೆಸಲು, ನೀವು ಪೊಲೀಸರಿಂದ ಪೂರ್ವಾನುಮತಿ ಪಡೆಯಬೇಕು
- ಅನುಮತಿಗಳನ್ನು ಪಡೆಯಲು ಅರ್ಜಿಗಳನ್ನು ಪಡೆಯಿರಿ. ಇವು ಯಾವುದೇ ಪೊಲೀಸ್ ಠಾಣೆಯಲ್ಲಿ ಅಥವಾ ಕರ್ನಾಟಕ ರಾಜ್ಯ ಪೊಲೀಸ್ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಅರ್ಜಿಗಳನ್ನು ಮುಖತಃ ಸಲ್ಲಿಸಬೇಕಾಗಿದೆ, ಆನ್‌ಲೈನ್‌ನಲ್ಲಿ ಅಲ್ಲ.
- ಅರ್ಜಿಯಲ್ಲಿ, ನೀವು ಪ್ರತಿಭಟನೆಯ ಸ್ಥಳ, ಪ್ರತಿಭಟನೆಯ ಸಮಯ ಮತ್ತು ಅವಧಿ, ಪಾಲ್ಗೊಳ್ಳುವ ಜನರು ಅಥವಾ ಸಂಘಟನೆಗಳು ಮತ್ತು ಪ್ರತಿಭಟನೆಯನ್ನು ನಡೆಸಲು ಕಾರಣ ಮುಂತಾದ ವಿವರಗಳನ್ನು ನೀಡಬೇಕು.
- ನೀವು ಪ್ರತಿಭಟನಾ ರ್ಯಾಲಿ ನಡೆಸಲು ಯೋಜಿಸುತ್ತಿದ್ದರೆ, ರ್ಯಾಲಿ ಹೋಗುವ ಮಾರ್ಗವನ್ನು ನಮೂದಿಸಬೇಕು.
- ಯಾವ ರೀತಿಯ ವಾಹನ ಎಂಬ ವಿವರಣೆಯನ್ನು ಮತ್ತು ವಾಹನಗಳ ಸಂಖ್ಯೆಯನ್ನು ನಮೂದಿಸಬೇಕು.
- ನೀವು ವಾಹನಗಳು ಅಥವಾ ವೇದಿಕೆ ಬಳಸಲು ಯೋಜಿಸುತ್ತಿದ್ದರೆ, ಅವುಗಳ ಫಿಟ್‌ನೆಸ್ ಪ್ರಮಾಣಪತ್ರವನ್ನು ಒದಗಿಸಬೇಕು.
- ಅಲ್ಲದೆ, ಪ್ರತಿಭಟನೆಯನ್ನು ಖಾಸಗಿ ಸ್ಥಳದಲ್ಲಿ ನಡೆಸಬೇಕಾದರೆ, ನೀವುಸ್ಥಳದ ಮಾಲೀಕರಿಂದ ನಿರಾಕ್ಷೇಪಣೆ ಪ್ರಮಾಣಪತ್ರವನ್ನು (ಎನ್‌ಒಸಿ) ಪಡೆಯಬೇಕು.
- ಧ್ವನಿವರ್ಧಕಗಳನ್ನು ಬಳಸಲು ನೀವು ಯೋಜಿಸಿದರೆ ನೀವು ಪ್ರತ್ಯೇಕ ಪರವಾನಗಿ ಪಡೆಯಬೇಕು.
- ಪ್ರತಿಭಟನೆಯ ಮುಂಚೂಣಿಯಲ್ಲಿರುವವ್ಯಕ್ತಿ ಅಥವಾ ಗುಂಪು ಅದು ಕಾನೂನುಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮತ್ತು ಪ್ರತಿಭಟನೆಯ ಸಮಯದಲ್ಲಿ ಪೊಲೀಸ್ ಪರವಾನಗಿಯನ್ನು ಹೊಂದಿರಬೇಕು.

ನೀವು ಅನುಮತಿಗಾಗಿ ಯಾರನ್ನು ಸಂಪರ್ಕಿಸಬೇಕು?
- ನೀವು ಉಪ–ವಿಭಾಗೀಯ ಪೊಲೀಸ್ ಅಧಿಕಾರಿ, ಸರ್ಕಲ್ ಇನ್ಸ್‌ಪೆಕ್ಟರ್ ಅಥವಾ ಸ್ಟೇಷನ್ ಹೌಸ್ ಆಫೀಸರ್ ರವರಿಗೆ ಅರ್ಜಿಯನ್ನು ಸಲ್ಲಿಸಿ, ಸಹಿ ಮಾಡಿದ ಪರವಾನಗಿಯನ್ನು ಪಡೆಯಬೇಕು. ಅಧಿಕಾರಿ ನಿಮಗೆ ೧೫ ಕೆಲಸದ ದಿನಗಳಲ್ಲಿ ಪ್ರತಿಕ್ರಿಯೆ ನೀಡಬೇಕು
- ನಿಮ್ಮ ವಿನಂತಿಯನ್ನು ನಿರಾಕರಿಸಿದರೆ, ನೀವು ವಲಯ ಉಪ ಪೊಲೀಸ್ ಆಯುಕ್ತರನ್ನು (ಡಿಸಿಪಿ) ಸಂಪರ್ಕಿಸಬಹುದು, ಅವರು ೧೦ ಕೆಲಸದ ದಿನಗಳಲ್ಲಿ ಪ್ರತಿಕ್ರಿಯಿಸಬೇಕು. ಕಾರ್ಯಕರ್ತರು ಸಾಮಾನ್ಯವಾಗಿ ಅರ್ಜಿಗಳನ್ನು ನೇರವಾಗಿ ಡಿಸಿಪಿಗೆ ಸಲ್ಲಿಸುತ್ತಾರೆ ಮತ್ತು ಒಂದು ವಾರದೊಳಗೆ ಪ್ರತಿಕ್ರಿಯೆ ಪಡೆಯುತ್ತಾರೆ.
- ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯನ್ನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯ, ಆಗ್ನೇಯ ಮತ್ತು ಈಶಾನ್ಯ ಎಂದು ಏಳು ವಲಯಗಳಾಗಿ ವಿಂಗಡಿಸಲಾಗಿರುವುದರಿಂದ, ಪ್ರತಿಭಟನಾ ಸ್ಥಳದ ವ್ಯಾಪ್ತಿಯನ್ನು ಹೊಂದಿರುವ ಡಿಸಿಪಿಯಿಂದ ಪರವಾನಗಿ ಪಡೆಯಬೇಕು. ನೀವು ರ್ಯಾಲಿ ನಡೆಸಲು ಯೋಜಿಸುತ್ತಿದ್ದರೆ, ಮತ್ತು ಅದರ ಮಾರ್ಗವು ಎರಡು ವಲಯಗಳ ವ್ಯಾಪ್ತಿಯಲ್ಲಿ ಇದ್ದರೇ, ನೀವು ಎರಡೂ ವಲಯಗಳ ಪೊಲೀಸ್ ಪ್ರಾಧಿಕಾರದಿಂದ ಅನುಮತಿಗಳನ್ನು ಪಡೆಯಬೇಕು.
- ನಿಮ್ಮ ವಿನಂತಿಯನ್ನು ಡಿಸಿಪಿ ನಿರಾಕರಿಸಿದರೆ, ನೀವು ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಬಹುದು, ಅವರು ಏಳು ಕೆಲಸದ ದಿನಗಳಲ್ಲಿ ಪ್ರತಿಕ್ರಿಯಿಸುತ್ತಾರೆ.
- ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಮೂನೆಗಳು ಸ್ಥಳೀಯ ಪೊಲೀಸ್ ಠಾಣೆ ಮತ್ತು ಕೆ ಎಸ್ ಪಿ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಡಿಸಿಪಿ (ನಿರ್ವಹಣೆ) ಮೂರು ಕೆಲಸದ ದಿನಗಳಲ್ಲಿ ಪರವಾನಗಿ ನೀಡಬೇಕಾಗುತ್ತದೆ. ನಿಮಗೆ ಏಳು ದಿನಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಸಿಗದಿದ್ದರೆ, ನೀವು ಹೆಚ್ಚುವರಿ ಪೊಲೀಸ್ ಆಯುಕ್ತರನ್ನು (ನಿರ್ವಹಣೆ) ಸಂಪರ್ಕಿಸಬಹುದು. ವಿನಂತಿಯನ್ನು ಇವರೂ ನಿರಾಕರಿಸಿದರೆ, ನೀವು ಪೊಲೀಸ್ ಆಯುಕ್ತರಿಗೆ ಎರಡನೇ ಮನವಿಯನ್ನು ಸಲ್ಲಿಸಬಹುದು, ಅವರು ೧೦ ದಿನಗಳಲ್ಲಿ ಪ್ರತಿಕ್ರಿಯಿಸುತ್ತಾರೆ.
- ನಿಮ್ಮ ಪತ್ರಗಳು ಅಥವಾ ಅರ್ಜಿಗಳನ್ನು ಸ್ವೀಕರಿಸಿದ 24 ಗಂಟೆಗಳ ಒಳಗೆ ಪೊಲೀಸ್ ಅಧಿಕಾರಿಗಳು ಅಂಗೀಕರಿಸಬೇಕು
ಬೆಂಗಳೂರಿನಲ್ಲಿ ಪೊಲೀಸರು ಹಲವಾರು ಪ್ರತಿಭಟನೆಗಳಿಗೆ ಅನುಮತಿ ನಿರಾಕರಿಸಿದ್ದಾರೆ ಮತ್ತು ಪ್ರತಿಭಟನಾಕಾರರನ್ನೂ ವಶಕ್ಕೆ ಪಡೆದಿದ್ದಾರೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಾಜಿ ಸಿಜೆಐ ರಂಜನ್ ಗೊಗೊಯ್ ಅವರಿಗೆ ನೀಡಿದ ಕ್ಲೀನ್ ಚಿಟ್ ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಅನುಮತಿ ಕೋರಿದ ಅರ್ಜಿಗೆ ಡಿಸಿಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಆಗ ಬಂಧನಕ್ಕೊಳಗಾದವರಲ್ಲಿ ವಕೀಲರಾದ ವಿನಯ್ ಶ್ರೀನಿವಾಸ ಅವರು “ಪ್ರತಿಭಟಿಸುವ ಹಕ್ಕನ್ನು ಹಲವು ಬಾರಿ ನಿರಾಕರಿಸಲಾಗಿದೆ” ಎಂದು ಹೇಳುತ್ತಾರೆ.
ಪ್ರತಿಭಟನೆಯ ಸಮಯದಲ್ಲಿ ನಿಮ್ಮನ್ನು ಬಂಧಿಸಿದರೆ, ನಿಮ್ಮ ಹಕ್ಕುಗಳೇನು?
ಸಿಎಎ / ಎನ್‌ಆರ್‌ಸಿ ವಿರೋಧಿಸಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ – ಅವರನ್ನು ಸ್ಥಳದಿಂದ ಕೊಂಡೊಯ್ದು, ಬೇರೆ ಸ್ಥಳದಲ್ಲಿ ಹಿಡಿದಿಟ್ಟುಕೊಂಡು ಕೆಲವು ಗಂಟೆಗಳ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ಇದು ಬಂಧನಕ್ಕಿಂತ ಭಿನ್ನವಾಗಿದೆ. ಪ್ರತಿಭಟನೆಯ ಸಮಯದಲ್ಲಿ ನೀವು ಬಂಧನಕ್ಕೊಳಗಾದಾರೆ, ನಿಮಗೆ ಈ ಕೆಳಗಿನ ಹಕ್ಕುಗಳಿವೆ:
ಮೂಲ ಮಾಹಿತಿ : nyaaya.org |
ಪ್ರತಿಭಟಿಸಲು ಪೊಲೀಸರು ಅನುಮತಿಯನ್ನು ಯಾವಾಗ ನಿರಾಕರಿಸಬಹುದು?
ಪ್ರತಿಭಟನೆಗಳಿಗೆ ಅನುಮತಿ ನಿರಾಕರಿಸುವ ಅಧಿಕಾರವನ್ನು ಕರ್ನಾಟಕ ಪೊಲೀಸ್ ಕಾಯ್ದೆ ಪೊಲೀಸರಿಗೆ ನೀಡುತ್ತದೆ, ಆದರೆ ಸರಿಯಾದ ಕಾರಣವಿದ್ದರೆ ಮಾತ್ರ.
ಸಾರ್ವಜನಿಕ ಭದ್ರತೆಗೆ ಯಾವುದೇ ಬೆದರಿಕೆ ಇದ್ದಲ್ಲಿ ಅಥವಾ ಕಾನೂನು ಸುವ್ಯವಸ್ಥೆಗೆ ತೊಡಕು ಉಂಟುಮಾಡಿದರೆ ಪ್ರತಿಭಟನೆಗೆ ಪೊಲೀಸರು ಅನುಮತಿಯನ್ನು ನಿರಾಕರಿಸಬಹುದು. ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 31 (ಡಬ್ಲ್ಯೂ (ii)) ಸುತ್ತಮುತ್ತಲಿನ ನಿವಾಸಿಗಳು ಅಥವಾ ಪ್ರಯಾಣಿಕರಿಗೆ ಅಡಚಣೆ, ಅನಾನುಕೂಲತೆ, ಕಿರಿಕಿರಿ, ಅಪಾಯ ಅಥವಾ ಹಾನಿಯನ್ನು ತಡೆಗಟ್ಟಲು ಆಯುಕ್ತರು ಅಥವಾ ಮ್ಯಾಜಿಸ್ಟ್ರೇಟ್ ಸಾರ್ವಜನಿಕ ಸಭೆಯನ್ನು ನಿಷೇಧಿಸಬಹುದು ಎಂದು ಹೇಳುತ್ತದೆ.

ಕಾಯ್ದೆಯ ಇತರ ಕೆಲವು ವಿಭಾಗಗಳು ಪ್ರತಿಭಟನೆಗಳ ನಿಯಂತ್ರಣವನ್ನು ಸಹ ಅನುಮತಿಸುತ್ತವೆ:
- ಸೆಕ್ಷನ್ 31 (ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರ ನಿಯಂತ್ರಣ ಮತ್ತು ಸಂರಕ್ಷಣೆ ಕುರಿತು): ನಗರ ಪೊಲೀಸ್ ಆಯುಕ್ತರು ಪ್ರತಿಭಟನಾಕಾರರ ನಡವಳಿಕೆಯನ್ನು ನಿಯಂತ್ರಿಸಬಹುದು, ಅವರು ಚಲಿಸುವ ಮಾರ್ಗಗಳನ್ನು ಸೂಚಿಸಬಹುದು ಮತ್ತು ಪ್ರತಿಭಟನಾ ಸ್ಥಳಗಳ ಪ್ರವೇಶ ಮತ್ತು ನಿರ್ಗಮನವನ್ನು ನಿಯಂತ್ರಿಸಬಹುದು.
- ಸೆಕ್ಷನ್ 35 (ಅವ್ಯವಸ್ಥೆ ತಡೆಗಟ್ಟುವಿಕೆ): ಸಾರ್ವಜನಿಕರ ಮೇಲೆ ಪರಿಣಾಮ ಬೀರುವಂತಹ ಕೆಲವು ಘೋಷಣೆಗಳು, ಫಲಕಗಳ ಪ್ರದರ್ಶನ, ಚಿತ್ರಗಳು ಇತ್ಯಾದಿಗಳನ್ನು ರಾಜ್ಯದ ಭದ್ರತೆಯನ್ನು ಹಾಳುಮಾಡಬಹುದು ಅಥವಾ ಅಪರಾಧದ ಪ್ರಚೋದಿಸಬಹುದು ಎಂಬ ಕಾರಣ ಸೂಚಿಸಿ ಆಯುಕ್ತರು ಪ್ರತಿಭಟನೆಯನ್ನು ನಿಷೇಧಿಸಬಹುದು.
- ಸೆಕ್ಷನ್ 40 (ಸಾರ್ವಜನಿಕ ಸಭೆಗಳಲ್ಲಿ ಅವ್ಯವಸ್ಥೆಯನ್ನು ತಡೆಗಟ್ಟುವುದು): ಕಾನ್‌ಸ್ಟೆಬಲ್‌ಗಿಂತ, ಉನ್ನತ ಹುದ್ದೆಯ ಘಟನಾಸ್ಥಳದಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿ, ಸಾರ್ವಜನಿಕ ಸಭೆಯಲ್ಲಿ ಒಟ್ಟುಗೂಡಿದವರು ಅನುಭವಿಸಬೇಕಾಗಬಹುದಾದ ಅವ್ಯವಸ್ಥೆ ಅಥವಾ ಅಪಾಯವನ್ನು ತಡೆಗಟ್ಟಲು ಸಾರ್ವಜನಿಕರಿಗೆ ನಿರ್ದೇಶನಗಳನ್ನು ನೀಡಬಹುದು. ಇದನ್ನು ಮಾಡಲು, ಸಾರ್ವಜನಿಕ ಸಭೆಯ ಸ್ಥಳಗಳಿಗೆ ಪೊಲೀಸರು ಪ್ರವೇಶಿಸಬಹುದು.
ಭಾರತೀಯ ಸಂವಿಧಾನದ 246 ನೇ ವಿಧಿಯು ‘ಸಾರ್ವಜನಿಕ ಸುವ್ಯವಸ್ಥೆಯನ್ನು’ ಪುನಃಸ್ಥಾಪಿಸಲು ಪೊಲೀಸರಂತಹ ಏಜೆನ್ಸಿಗಳನ್ನು ಬಳಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುತ್ತದೆ.
ಸಾಮಾನ್ಯವಾಗಿ, ಪ್ರತಿಭಟನೆಗೆ ಯಾವುದೇ ನೀತಿ ಸಂಹಿತೆ ಇಲ್ಲ. ಆದರೆ, 2009 ರ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಹಾನಿ ಹಾಗೂ ಆಂಧ್ರ ಪ್ರದೇಶ ರಾಜ್ಯ ಮತ್ತು ಇತರರು ,ಸುಪ್ರೀಂ ಕೋರ್ಟ್ ಕೇಸಿನ ತೀರ್ಪಿನಲ್ಲಿ, ಪ್ರತಿಭಟನೆಗಳ ಸಮಯದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗೆ ಯಾವುದೇ ನಷ್ಟ ಸಂಭವಿಸಿದಲ್ಲಿ ಪ್ರತಿಭಟನೆಯ ಸಂಘಟಕರು ವೈಯಕ್ತಿಕವಾಗಿ ಜವಾಬ್ದಾರರಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆ. ಹೊಣೆಗಾರಿಕೆಯನ್ನು ಹೊರಿಸಲು ವಿಡಿಯೋಗ್ರಾಫ್ ದಾಖಲಿಸುವಂತೆ ನ್ಯಾಯಾಲಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದೆ.
ನಿಯಮ ಉಲ್ಲಂಘಿಸಿದರೆ ದಂಡ
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 144 ರ ಪ್ರಕಾರ, ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆಯನ್ನು ಅವರು ಈ ಕೆಳಗಿನ ಯಾವುದೇ ಗುರಿಯೊಂದಿಗೆ, ಕಾನೂನುಬಾಹಿರವೆಂದು ಸರ್ಕಾರವು ಪರಿಗಣಿಸಬಹುದು.
- ಯಾವುದೇ ಕಾನೂನು ಅಥವಾ ಕಾನೂನು ಪ್ರಕ್ರಿಯೆಯ ಪರಿಪಾಲನೆಯನ್ನುವಿರೋಧಿಸುತ್ತಿದ್ದರೇ
- ಅತಿಕ್ರಮಣ ಪ್ರವೇಶ
- ಬಲ ಪ್ರಯೋಗದಿಂದ ಯಾವುದೇ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದು
- ಒಬ್ಬ ವ್ಯಕ್ತಿಯನ್ನು ಕಾನೂನುಬಾಹಿರ ಚಟುವಟಿಕೆ ಮಾಡಲು ಒತ್ತಾಯಿಸುವುದು
- ಸರ್ಕಾರದ ಮೇಲೆ ಭೀತಿ ಸೃಷ್ಟಿಸುವುದು
ಇಂತಹ ಕಾನೂನುಬಾಹಿರ ಸಭೆಯ ಪ್ರತಿಯೊಬ್ಬ ಸದಸ್ಯರಿಗೆಈ ಕೆಳಕಂಡ ಶಿಕ್ಷೆ ವಿಧಿಸಬಹುದು:
- ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ (ಐಪಿಸಿ ಸೆಕ್ಷನ್ 143)
- ಹಾನಿಯನ್ನುಂಟುಮಾಡುವ ವಸ್ತುಗಳೊಂದಿಗೆ ಜನರು ಸಭೆಗೆ ಸೇರಿದ್ದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ (ಐಪಿಸಿ ಸೆಕ್ಷನ್ 144)
ನೀವು ಎಲ್ಲಿ ಪ್ರತಿಭಟಿಸಬಹುದು?
ಯಾವುದೇ (ಸರ್ಕಾರ, ಸಾರ್ವಜನಿಕ, ಖಾಸಗಿ) ಸಂಸ್ಥೆ , ಜನರನ್ನು ಹೇಗೆ ಕೈ ಬಿಟ್ಟಿದೆಎಂದು ತೋರಿಸಲು ಪ್ರತಿಭಟನೆಗಳನ್ನು ಮುಖ್ಯವಾಗಿ ನಡೆಸಲಾಗುತ್ತದೆ ಮತ್ತು ಆದ್ದರಿಂದ ಸಂದೇಶವು ಜೋರಾಗಿ ಮತ್ತು ಸ್ಪಷ್ಟವಾಗಿ ಹೊರ ಹೊಮ್ಮಬೇಕಾಗುತ್ತದೆ. ಆದ್ದರಿಂದ ಪ್ರತಿಭಟನಾಕಾರರು ಮತ್ತು ಅವರ ಸಂದೇಶಗಳು ಗೋಚರಿಸುವ ಸ್ಥಳಗಳಲ್ಲಿ ಪ್ರತಿಭಟನೆಯನ್ನು ನಡೆಸಬೇಕು.
ತಾಂತ್ರಿಕವಾಗಿ, ನೀವು ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸದಿರುವವರೆಗೆ ಬೆಂಗಳೂರಿನಲ್ಲಿ ನೀವು ವಿಧಾನ ಸೌಧದ ಒಳಗೆ ಹೊರತುಪಡಿಸಿ ಎಲ್ಲಿಯಾದರೂ ಪ್ರತಿಭಟನೆ ನಡೆಸಬಹುದು. ಇನ್ನೂ ಫ್ರೀಡಂ ಪಾರ್ಕ್, ಬನ್ನಪ್ಪ ಪಾರ್ಕ್, ಟೌನ್ ಹಾಲ್ ಮತ್ತು ಮೌರ್ಯ ಸರ್ಕಲ್ ನಂತಹ ಕೆಲವು ಸ್ಥಳಗಳಲ್ಲಿ ಅನೇಕ ಪ್ರತಿಭಟನಾಕಾರರು ಸೇರುತ್ತಾರೆ.

ಈ ಹಿಂದೆ ನಗರದ ಸಂಚಾರ ಪೊಲೀಸರ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೇಳುತ್ತಾರೆ, “ವಿಧಾನ ಸೌಧ ಬಳಿ ಹೊರತುಪಡಿಸಿ ಎಲ್ಲಿಯಾದರೂ ಪ್ರತಿಭಟಿಸಬಹುದು. ಆದರೆ ಫ್ರೀಡಂ ಪಾರ್ಕ್‌ನಂತಹ ಸ್ಥಳಗಳು ಧೀರ್ಘ ಕಾಲದಿಂದ ಪ್ರತಿಭಟನಾ ಸ್ಥಳಗಳಾಗಿರುವುದರಿಂದ ಜನರು ಸಾಮಾನ್ಯವಾಗಿ ಅಲ್ಲಿ ಪ್ರತಿಭಟಿಸಲು ಆಯ್ಕೆ ಮಾಡುತ್ತಾರೆ“.
ಆದರೆ ಕಾರ್ಯಕರ್ತರು ಇದನ್ನು ಒಪ್ಪುವುದಿಲ್ಲ. “ಫ್ರೀಡಂ ಪಾರ್ಕ್, ಮೌರ್ಯ ಸರ್ಕಲ್ ಮುಂತಾದ ಸ್ಥಳಗಳಲ್ಲಿ ಮಾತ್ರ ನಮಗೆ ಪ್ರತಿಭಟನೆಗೆ ಅನುಮತಿ ಪಡೆಯುತ್ತೇವೆ. ಇಲ್ಲದಿದ್ದರೆ ನಮಗೆ ಅನುಮತಿ ಸಿಗುವುದಿಲ್ಲ” ಎಂದು ನಗರದ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ನರಸಿಂಹ ಮೂರ್ತಿ ಹೇಳುತ್ತಾರೆ.
ಸಿಎಫ್‌ಬಿ (ಸಿಟಿಜನ್ಸ್ ಫಾರ್ ಬೆಂಗಳೂರು) ನ ಕಾರ್ಯಕರ್ತೆ ಮತ್ತು ಸಹ ಸಂಸ್ಥಾಪಕಿ ತಾರಾ ಕೃಷ್ಣಸ್ವಾಮಿ ಅವರ ಪ್ರಕಾರ, ಸಾರ್ವಜನಿಕ ಜಾಗದಲ್ಲಿ ಇತರ ಕಾರ್ಯಗಳಿಗೆ ಅಡ್ಡಿಪಡಿಸದಿದ್ದಲ್ಲಿ ಎಲ್ಲಿಯಾದರೂ ಶಾಂತಿಯುತವಾಗಿ ಜನರನ್ನು ಒಟ್ಟುಗೂಡಿಸುವ ಹಕ್ಕನ್ನು ನಾಗರಿಕರು ಹೊಂದಿದ್ದಾರೆ. ಆದರೆ ಏಕರೂಪವಾಗಿ ಪೊಲೀಸರು ಅವರನ್ನು ನಿರ್ದಿಷ್ಟ ಸ್ಥಳಕ್ಕೆ ಸೀಮಿತಗೊಳಿಸುತ್ತಾರೆ. ಚೆನ್ನೈ, ಮುಂಬೈ, ಹೈದರಾಬಾದ್ ಅಥವಾ ದೆಹಲಿಯ ಯಾವುದೇ ನಗರದಲ್ಲಿ ಪರಿಸ್ಥಿತಿ ಹೀಗೆಯೇ ಇದೆ ಎಂದು ಅವರು ಹೇಳುತ್ತಾರೆ. “ಕೆಲವು ವರ್ಷಗಳ ಹಿಂದೆ, ಬ್ರಿಗೇಡ್ ರಸ್ತೆಯ ಬಳಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಹಿಳೆಯರು ಕಿರುಕುಳಕ್ಕೊಳಗಾದಾಗ, ನಾವು ಬ್ರಿಗೇಡ್ ರಸ್ತೆ ಮತ್ತು ಎಂಜಿ ರಸ್ತೆಯ ಮೂಲೆಯಲ್ಲಿ ಪ್ರತಿಭಟನೆಯನ್ನು ಆಯೋಜಿಸಲು ಬಯಸಿದ್ದೆವು, ಆದರೆ ಪೊಲೀಸರು ನಮಗೆ ಅನುಮತಿ ನೀಡಲಿಲ್ಲ. ಬದಲಾಗಿ ನಾವು ಟೌನ್ ಹಾಲ್ ಅಥವಾ ಮೈಸೂರು ಬ್ಯಾಂಕ್ ಸರ್ಕಲ್ ಮುಂದೆ ಹೋಗಬೇಕೆಂದು ಅವರು ಒತ್ತಾಯಿಸಿದರು. ಆದರೆ ಬ್ರಿಗೇಡ್ ರಸ್ತೆಯಲ್ಲಿ ಘಟನೆ ಸಂಭವಿಸಿದಾಗ ಬೇರೆಲ್ಲೋ ನಿಲ್ಲುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾರೂ ನಮ್ಮನ್ನು ನೋಡದ ಫ್ರೀಡಂ ಪಾರ್ಕ್ ಒಳಗೆ ಪ್ರತಿಭಟಿಸಿದರೆ ಅದು ಯಾರಿಗೂ ಯಾವುದೇ ಸಂದೇಶವನ್ನು ಕಳುಹಿಸುವುದಿಲ್ಲ. ಪ್ರತಿಭಟನೆ ನಡೆಯುತ್ತಿದೆ ಎಂದು ಜನರು ಅರಿತುಕೊಳ್ಳುವುದಿಲ್ಲ ”ಎಂದು ತಾರಾ ಹೇಳುತ್ತಾರೆ.
ಸದ್ಯಕ್ಕೆ, ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರಿಯುತ್ತದೆಯೇ ಮತ್ತು ಸರ್ಕಾರ ಇವುಗಳನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ನೋಡಬೇಕಾಗಿದೆ.
Read the original in English here.
About our volunteer translator
Umeshbabu Pillegowda is a resident of Byatarayanapura. He is a civic leader with B.PAC, and a Bengalurean by heart.