ಲೆಕ್ಕಕ್ಕುಂಟು ಚಿಕಿತ್ಸೆಗಿಲ್ಲ: ಬೆಂಗಳೂರಿನಲ್ಲಿ ಕೋವಿಡ್ ಹಾಸಿಗೆಗಳ ಸಂಖ್ಯಾಶಾಸ್ತ್ರ

ಆಸ್ಪತ್ರೆಗಳ ಹಾಸಿಗೆ ಕೊರತೆ

Hospital beds
Pic: pxfuel.com

ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರ ಹಿಂದೆಯೇ ಕೇಳಿಬಂದ ಬಹುಮುಖ್ಯ ದೂರು ಆಸ್ಪತ್ರೆಗಳ ಹಾಸಿಗೆ ಕೊರತೆ ಮತ್ತು ಚಿಕಿತ್ಸೆ ನಿರಾಕರಣೆ. ಇತ್ತೀಚೆಗೆ ರಾಮನಗರ ಜಿಲ್ಲೆಯ ಚಿಕ್ಕಮುದವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಚಿಕಿತ್ಸೆಯಲ್ಲಿ ತೊಡಗಿದ್ದ ವೈದ್ಯ ಡಾ. ಮಂಜುನಾಥ್ ಎಸ್.ಟಿ.  ಚಿಕಿತ್ಸೆ ದೊರೆಯದೆ ಕೊನೆಯುಸಿರೆಳೆದರು. ಬೆಂಗಳೂರಿನ ಮೂರು ಆಸ್ಪತ್ರೆಗಳು ಅವರನ್ನು ಒಳರೋಗಿಯಾಗಿ ದಾಖಲಿಸಿಕೊಳ್ಳಲು ನಿರಾಕರಿಸಿ ಹಿಂದಕ್ಕೆ ಕಳುಹಿಸಿದ್ದವು.

ಇಷ್ಟೆಲ್ಲಾ ಆದ ಮೇಲೂ ಸರ್ಕಾರ ಮಾತ್ರ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಹಾಸಿಗೆಗಳು ಲಭ್ಯವಿವೆ ಎಂದು ಹೇಳುತ್ತಲೇ ಬಂದಿದೆ. ಜೂನ್ ತಿಂಗಳ ಕೊನೆಯಲ್ಲಿ ಸರ್ಕಾರ ಒಂದು ಆದೇಶ ಹೊರಡಿಸಿ ಖಾಸಗಿ ಆಸ್ಪತ್ರೆಗಳು ತಮ್ಮ ಸಾಮರ್ಥ್ಯದ ಅರ್ಧದಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಬೇಕು ಎಂದು ಹೇಳಿತು. ಜುಲೈ 7ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗಾಗಿ ಮೀಸಲಿಟ್ಟಿರುವ ಹಾಸಿಗೆಗಳಲ್ಲಿ ಶೇಕಡಾ 78ರಷ್ಟು ಖಾಲಿ ಇವೆ ಎಂದರು.

ಆಗಸ್ಟ್ 4ರಂದು ಈ ಲೇಖಕ  ಬಿಬಿಎಂಪಿಯ ಹಾಸಿಗೆ ಲಭ್ಯತೆಯ ಆಯಾ ಕ್ಷಣದ ಮಾಹಿತಿಯನ್ನು (https://apps.bbmpgov.in/covidbedstatus/) ಪರಿಶೀಲಿಸಿದಾಗಲೂ ಸಚಿವರು ಹೇಳಿದಂಥದ್ದೇ ಸ್ಥಿತಿಯಿತ್ತು. ಕೋವಿಡ್ ರೋಗಿಗಳಿಗಾಗಿ ಮೀಸಲಿಟ್ಟ ಹಾಸಿಗೆಗಳಲ್ಲಿ ಶೇಕಡಾ 60ರಷ್ಟು ಖಾಲಿ ಇದ್ದವು. ಪೋರ್ಟಲ್‌ನಲ್ಲಿರುವ ಮಾಹಿತಿಯಂತೆ ಒಟ್ಟು 13225 ಹಾಸಿಗೆಗಳಲ್ಲಿ 7889ರಲ್ಲಿ ಯಾವುದೇ ರೋಗಿಗಳಿರಲಿಲ್ಲ. ಹೀಗೆ ಖಾಲಿ ಇದ್ದ ಹಾಸಿಗೆಗಳಲ್ಲಿ ಶೇಕಡಾ 96ಷ್ಟು ಅಂದರೆ 7593ರಷ್ಟು ಹಾಸಿಗೆಗಳೂ ಖಾಸಗಿ ಆಸ್ಪತ್ರೆಯವಾಗಿದ್ದವು.

ಇಷ್ಟೊಂದು ಒಳರೋಗಿಗಳಿಗೆ ಅವಕಾಶವಿದ್ದರೂ ಖಾಸಗಿ ಆಸ್ಪತ್ರೆಗಳೇಕೆ ಕೋವಿಡ್ ರೋಗಿಗಳನ್ನು ದೂರವಿರಿಸುತ್ತಿರುವುದೇಕೆ?

ಖಾಸಗಿ ಆಸ್ಪತ್ರೆ: ಲೆಕ್ಕಕ್ಕುಂಟು ಚಿಕಿತ್ಸೆಗಿಲ್ಲ

ಸರ್ಕಾರ ಪ್ರಕಟಿಸುವ ‘ಲಭ್ಯವಿರುವ ಹಾಸಿಗೆಗಳ ಪಟ್ಟಿ’ ಕೇವಲ ‘ನಿರೀಕ್ಷೆಯ ಪಟ್ಟಿ’ ಎಂದು ಬಿಡಬ್ಲ್ಯುಎಸ್ಎಸ್‌ಬಿಯ ಅಧ್ಯಕ್ಷ ತುಷಾರ್ ಗಿರಿನಾಥ್ ಕೂಡಾ ಒಪ್ಪುತ್ತಾರೆ. ಇವರ ನೇತೃತ್ವದಲ್ಲಿ  ಕೋವಿಡ್ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಕೇಂದ್ರೀಕೃತ ಪಟ್ಟಿಯೊಂದನ್ನು ಬಿಬಿಎಂಪಿ ನಿರ್ವಹಿಸುತ್ತಿದೆ.

308 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಪಟ್ಟಿ ಮಾಡಲಾಗಿದೆ. ಆದರೆ ಅವುಗಳಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ  ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಸಂಖ್ಯೆ 120 ಮಾತ್ರ. ಉಳಿದ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿವೆ ಅಥವಾ ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಿರುವ ಅಗತ್ಯ ಸೌಕರ್ಯಗಳೇ ಇಲ್ಲ ಎಂದು ತುಷಾರ್ ಗಿರಿನಾಥ್ ಹೇಳುತ್ತಾರೆ.

ಹಾಗಿದ್ದರೆ ಸರ್ಕಾರ ರೂಪಿಸಿರುವ ‘ಲಭ್ಯ ಹಾಸಿಗೆಗಳ ಪಟ್ಟಿ’ಯಲ್ಲಿರುವ ಹಾಸಿಗೆಗಳು ಎಲ್ಲಿಂದ ಬಂದವು?  ಖಾಸಗಿ ಆಸ್ಪತ್ರೆಗಳೆಲ್ಲವೂ ಶೇಕಡಾ 50ರಷ್ಟು ಹಾಸಿಗೆಗಳನ್ನು ಬಿಟ್ಟು ಕೊಡಬೇಕು ಎಂಬ ಸರ್ಕಾರಿ ಆದೇಶವನ್ನು ಆಧಾರವಾಗಿಟ್ಟುಕೊಂಡು ಈ ಪಟ್ಟಿಯನ್ನು ರೂಪಿಸಲಾಗಿದೆ. ತುಷಾರ್ ಗಿರಿನಾಥ್ ಹೇಳುವಂತೆ “ಕರ್ನಾಟಕದಲ್ಲಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಸರ್ಕಾರ ಕೆಪಿಎಂಇ ಸಂಖ್ಯೆಯೊಂದನ್ನು ನೀಡುತ್ತದೆ. ಈ ಸಂಖ್ಯೆಯನ್ನು ಹೊಂದಿರುವ ಪ್ರತೀ ಆಸ್ಪತ್ರೆಯ ಒಟ್ಟು ಹಾಸಿಗೆಗಳ ಶೇಕಡಾ 50ರಷ್ಟು ಸರ್ಕಾರ ರೂಪಿಸಿರುವ ‘ಲಭ್ಯತಾ ಪಟ್ಟಿ’ಯಲ್ಲಿವೆ. ವಾಸ್ತವದಲ್ಲಿ ಈ ಹಾಸಿಗೆಗಳನ್ನು ರೋಗಿಗಳಿಗೆ ಒದಗಿಸುವುದಕ್ಕೆ ಹಲವು ಸವಾಲುಗಳಿವೆ.”

ತುಷಾರ್ ಗಿರಿನಾಥ್ ಅವರು ವಿವರಿಸುವಂತೆ “ಕೆಲವು ಆಸ್ಪತ್ರೆಗಳು ಪ್ರತ್ಯೇಕ ಕೋವಿಡ್ ವಾರ್ಡ್‌ಗಳನ್ನು ಒದಗಿಸುವಷ್ಟು ಸ್ಥಳಾವಕಾಶ ಹೊಂದಿಲ್ಲ. ಇನ್ನು ಕೆಲವು ಆಸ್ಪತ್ರೆಗಳು ಅಗತ್ಯವಿರುವ ಸಲಕರಣೆಗಳಿಲ್ಲ ಅಥವಾ ಅವುಗಳನ್ನು ಹೊಂದಿಸಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಒಂದಷ್ಟು ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗಾಗಿ ಏನನ್ನು ಮಾಡಲೂ ಸಿದ್ಧವಿಲ್ಲ. ಸರ್ಕಾರವೇನೋ ಶೇಕಡಾ 50ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡಲು ಕೇಳಿತು. ಆದರೆ ದೊರೆತದ್ದು ಕೇವಲ ಶೇಕಡಾ 10 ರಿಂದ 20ರಷ್ಟ ಮಾತ್ರ.”

ಬಿಬಿಎಂಪಿ ಪೋರ್ಟಲ್‌ನ ಪ್ರಕಾರ ಲಭ್ಯವಿರುವ ಹಾಸಿಗೆಗಳು ಹಾಗೂ ವಾಸ್ತವದಲ್ಲಿ ಲಭ್ಯವಿರುವ ಹಾಸಿಗೆಗಳ
 ಸರ್ಕಾರಿ ಆಸ್ಪತ್ರೆಖಾಸಗಿ ಆಸ್ಪತ್ರೆ
ಬಿಬಿಎಂಪಿ ಪೋರ್ಟಲ್ ಪ್ರಕಾರ ಕೋವಿಡ್ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಸಂಖ್ಯೆ19317
ಸಾಮಾನ್ಯ ಹಾಸಿಗೆಗಳು7287944
ಹೈ ಡಿಪೆಂಡೆನ್ಸಿ ಯೂನಿಟ್ ಹಾಸಿಗೆಗಳು (ಎಚ್‌ಡಿಯು)6482276
ಐಸಿಯು ಹಾಸಿಗೆಗಳು51786
ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು99693
ಬಿಬಿಎಂಪಿ ಪೋರ್ಟಲ್ ಪ್ರಕಾರ ಒಟ್ಟು ಹಾಸಿಗೆಗಳು152611699
ತುಷಾರ್ ಗಿರಿನಾಥ್ ಅವರ ಪ್ರಕಾರ ಒಟ್ಟು ಆಸ್ಪತ್ರೆಗಳ ಸಂಖ್ಯೆ ~120
ತುಷಾರ್ ಗಿರಿನಾಥ್ ಅವರ ಪ್ರಕಾರ ಒಟ್ಟು ಹಾಸಿಗೆಗಳ ಸಂಖ್ಯೆ ~2000
Covidbeds.org ಪ್ರಕಾರ ಒಟ್ಟು ಹಾಸಿಗೆಗಳ ಸಂಖ್ಯೆ ~2000

ರಾಜ್ಯ ಸರ್ಕಾರದ ಕೋವಿಡ್ ತಜ್ಞರ ಸಮಿತಿಯ ಸದಸ್ಯ ಡಾ. ಗಿರಿಧರ್ ಬಾಬು ಅವರು ಹೇಳುವಂತೆ ಬೆಂಗಳೂರಿನಲ್ಲಿ ಕೋವಿಡ್ ಬಾಧೆಗೆ ಒಳಗಾದವರು ಚಿಕಿತ್ಸೆ ಪಡೆಯಲು ಮೂರು ಮಾರ್ಗಗಳಿವೆ.

  • ಸರ್ಕಾರಿ ಆಸ್ಪತ್ರೆ: ಬಿಬಿಎಂಪಿಯ ಕೇಂದ್ರೀಕೃತ ಒಳರೋಗಿ ದಾಖಲಾತಿ ವ್ಯವಸ್ಥೆಯನ್ನು ಬಳಸಿ ಚಿಕಿತ್ಸೆಗಾಗಿ ದಾಖಲಾಗಬಹುದು. ಚಿಕಿತ್ಸೆ ಉಚಿತ.
  • ಖಾಸಗಿ ಆಸ್ಪತ್ರೆ (ಸರ್ಕಾರಿ ಕೋಟಾ):  ಜೂನ್ ತಿಂಗಳಲ್ಲಿ ಸರ್ಕಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್ಎಎಸ್‌ಟಿ) ರಚಿಸಿತು. ಕೋವಿಡ್ ರೋಗಿಗಳಿಗೆ ವಿನಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳ ಪಟ್ಟಿಯೊಂದನ್ನು ರೂಪಿಸುವುದು ಎಸ್ಎಎಸ್‌ಟಿಯ ಉದ್ದೇಶಗಳಲ್ಲೊಂದು. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳು ಶೇಕಡಾ 50ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಬೇಕೆಂಬ ಆದೇಶವನ್ನೂ ಹೊರಡಿಸಲಾಯಿತು.
  • ಖಾಸಗಿ ಆಸ್ಪತ್ರೆಗಳು (ಸ್ವತಂತ್ರ): ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಬಹುದು. ಇವರನ್ನು ದಾಖಲಿಸಿಕೊಳ್ಳುವುದು ಅಥವಾ ಬಿಡುವುದು ಆಸ್ಪತ್ರೆಗಳ ವಿವೇಚನೆಗೆ ಬಿಟ್ಟದ್ದು. ಚಿಕಿತ್ಸೆಯ ವೆಚ್ಚವನ್ನು ರೋಗಿಯೇ ಭರಿಸಬೇಕು. ಆಸ್ಪತ್ರೆಗಳು ವಿಧಿಸಬಹುದಾದ ಶುಲ್ಕಕ್ಕೆ ಸರ್ಕಾರವೇ ಮಿತಿಯೊಂದನ್ನು ಸೂಚಿಸಿದೆ (https://covid19.karnataka.gov.in/storage/pdf-files/HFW-228-ACS-2020.pdf).

ಬಿಬಿಎಂಪಿಯ ಸಂಖ್ಯೆಗೆ ಆಸ್ಪತ್ರೆಗಳ ಪ್ರತಿಸಂಖ್ಯೆ

ತಮ್ಮಲ್ಲಿರುವ ಹಾಸಿಗೆಗಳ ಸಂಖ್ಯೆಗೂ ಬಿಬಿಎಂಪಿ ಪೋರ್ಟಲ್‌ನಲ್ಲಿರುವ ಹಾಸಿಗೆಗಳ ಸಂಖ್ಯೆಗೂ ಸಂಬಂಧವೇ ಇಲ್ಲ ಎಂದು ಅನೇಕ ಆಸ್ಪತ್ರೆಗಳು ಹೇಳುತ್ತಿವೆ. ಉದಾಹರಣೆಗೆ ಬಿಬಿಎಂಪಿ ಪೋರ್ಟಲ್‌ನ ಪ್ರಕಾರ ಜಿಗಣಿಯಲ್ಲಿರುವ ಏಸ್-ಸುಹಾಸ್ ಆಸ್ಪತ್ರೆಯಲ್ಲಿ 25 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇವುಗಳಲ್ಲಿ ಎರಡು ಐಸಿಯು ಹಾಸಿಗೆಗಳು ಇನ್ನೆರಡು ವೆಂಟಿಲೇಟರ್ ಸವಲತ್ತಿರುವ ಐಸಿಯು ಹಾಸಿಗೆಗಳು. ಪೋರ್ಟಲ್ ಮಾಹಿತಿಯಂತೆ  ಎಲ್ಲಾ 25 ಹಾಸಿಗೆಗಳೂ ಖಾಲಿ ಇವೆ.

ಆದರೆ ಸುಹಾಸ್ ಆಸ್ಪತ್ರೆಯ ಹಿರಿಯ ವೈದ್ಯರು ಹೇಳುವಂತೆ  ಆಸ್ಪತ್ರೆಯಲ್ಲಿರುವುದು ಕೇವಲ 10 ಹಾಸಿಗೆಗಳು ಮಾತ್ರ, ಅವೆಲ್ಲಕ್ಕೂ ವೆಂಟಿಲೇಟರ್ ಸೌಲಭ್ಯವಿದೆ.  ಕೋವಿಡ್ ಪ್ರಕರಣಗಳು ಹೆಚ್ಚಲು ತೊಡಗಿದ ಆರಂಭದ ದಿನಗಳಿಂದಲೂ ಈ ಎಲ್ಲಾ ಹಾಸಿಗೆಗಳಲ್ಲೂ ರೋಗಿಗಳಿದ್ದಾರೆ. ಇವು ಖಾಲಿಯಾದ ಕೆಲವೇ ಗಂಟೆಗಳಲ್ಲಿ ಹೊಸರೋಗಿಗಳು ದಾಖಲಾಗುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆಯ ಹಾಸಿಗೆಗಳಿವೆ. ಆದರೆ ರೋಗಿಗಳನ್ನು ದಾಖಲಿಸಿಕೊಳ್ಳಲು ಬೇಕಿರುವಷ್ಟು ವೈದ್ಯರು ಮಚ್ಚು ದಾದಿಯರಿಲ್ಲ. ಅಷ್ಟೇ ಅಲ್ಲ ಕೋವಿಡ್ ಹೊರತಾದ ಕಾಯಿಲೆಗಳಿಂದ ಬಳಲುತ್ತಿರುವವರೂ  ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

How many COVID beds does Bangalore really have?
ಆಸ್ಪತ್ರೆ ತಲುಪಲು ಬೇಕಾದ ಅಂಬ್ಯುಲೆನ್ಸ್‌ ದೊರೆಯದೆ,   ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಸೇರಲಾಗದೆ ತೊಂದರೆ ಅನುಭವಿಸಿದ ಬೆಂಗಳೂರಿನ ಕೋವಿಡ್ ರೋಗಿಗಳ ಸಂಖ್ಯೆ ದೊಡ್ಡದು. ಚಿತ್ರ: ಪೀಟರ್ ರಿಚ್ಮಂಡ್

ಇದೇ ಸ್ಥಿತಿ ಹಲವು ಆಸ್ಪತ್ರೆಗಳದ್ದು. ಬಿಬಿಎಂಪಿಯ ಪೋರ್ಟಲ್ ಪ್ರಕಾರ ರಾಜಾಜಿನಗರದ ಅನನ್ಯ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗೆ 25 ಹಾಸಿಗೆಗಳಿವೆ. ಇವೆಲ್ಲವೂ ಸಾಮಾನ್ಯ ಚಿಕಿತ್ಸೆಗೆ ಬಳಕೆಯಾಗುವಂಥವು. ಇವುಗಳಲ್ಲಿ 21 ಖಾಲಿ ಇವೆ ಎಂದು ಪೋರ್ಟಲ್ ಹೇಳುತ್ತದೆ. ಆದರೆ ಆಸ್ಪತ್ರೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯರೊಬ್ಬರು ಹೇಳುವಂತೆ ಬಹಳಷ್ಟು ವೈದ್ಯರು ಮತ್ತು ದಾದಿಯರು ಕೆಲಸಕ್ಕೇ ಬಾರದೇ ಇರುವುದರಿಂದ  ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ಸಾಧ್ಯವಾಗಿರುವುದು ಕೇವಲ 11-12 ಹಾಸಿಗೆಗಳನ್ನು ಮಾತ್ರ.

ತುಷಾರ್ ಗಿರಿನಾಥ್ ಅವರ ಮಾತುಗಳನ್ನೇ ಆಸ್ಪತ್ರೆಯ ಆಡಳಿತಗಳೂ ಹೇಳುತ್ತಿವೆ. ಬಿಬಿಎಂಪಿ ಹಾಸಿಗೆಗಳ ಸಂಖ್ಯೆಯನ್ನು ಪ್ರಕಟಿಸುವಾಗ ಆಸ್ಪತ್ರೆಗಳ ಬಳಿ ಕೇಳಿಯೇ ಇಲ್ಲ. ಏಸ್-ಸುಹಾಸ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳುವಂತೆ “ಸರ್ಕಾರಿ ಆದೇಶದ ಆಧಾರದ ಮೇಲೆ ಒಟ್ಟು ಹಾಸಿಗೆಗಳ ಶೇಕಡಾ 50ರಷ್ಟು ಎಂಬ ಲೆಕ್ಕಾಚಾರದಲ್ಲಿ ಬಿಬಿಎಂಪಿ ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು ಪ್ರಕಟಿಸುತ್ತಿದೆ. ಹಾಗಾಗಿ ನಮ್ಮ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಲಭ್ಯವಿರುವುದು 10 ಹಾಸಿಗೆಗಳಾದರೂ ಪೋರ್ಟಲ್ 25 ಎಂದು ತೋರಿಸುತ್ತಿದೆ”

ಮಲ್ಲೇಶ್ವರಂನಲ್ಲಿರುವ ಮಣಿಪಾಲ್ ನಾರ್ತ್‌ಸೈಡ್ ಆಸ್ಪತ್ರೆ ಮಾತ್ರ ತನ್ನಲ್ಲಿ ಲಭ್ಯವಿರುವ ಹಾಸಿಗೆಗಳ ಸಂಖ್ಯೆ ಮತ್ತು ಬಿಬಿಎಂಪಿ ಪೋರ್ಟಲ್‌ನಲ್ಲಿರುವ ಸಂಖ್ಯೆಗೆ ತಾಳೆಯಾುತ್ತದೆ ಎಂದು ಹೇಳುತ್ತದೆ.  “ಇಡೀ ಆಸ್ಪತ್ರೆಯನ್ನೇ ಬಿಬಿಎಂಪಿ ನಿರ್ವಹಿಸುತ್ತಿದೆ. ನಾವಿಲ್ಲಿ ಕೋವಿಡ್‌ಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದೇವೆ.” ಎಂದು ಅಲ್ಲಿನ ವೈದ್ಯರು ಹೇಳಿದರು.

ಆರಂಭದಲ್ಲೇ ತಪ್ಪಿದ ಲೆಕ್ಕಾಚಾರ

covidbeds.org ಸ್ಥಾಪಕ ಸಂತೋಷ್ ದೊಡ್ಡಯ್ಯ ಬೆಂಗಳೂರಿನಲ್ಲಿ ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು ಜುಲೈನಿಂದಲೂ ಗಮನಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ ಪ್ರತೀದಿನವೂ ಸಂಖ್ಯೆಗಳನ್ನು ಪ್ರಕಟಿಸುತ್ತಾರೆ. ಆಸ್ಪತ್ರೆಗಳು ಹಾಸಿಗೆಗಳಿಲ್ಲ ಎಂದು ರೋಗಿಗಳನ್ನು ಮರಳಿಸುತ್ತಿದ್ದಾಗ ಮಂತ್ರಿ ಕೆ.ಸುಧಾಕರ್ ಅವರು ದೊಡ್ಡ ಸಂಖ್ಯೆಯ ಹಾಸಿಗೆಗಳು ಲಭ್ಯವಿವೆ ಎಂದು ಪ್ರತಿಪಾದಿಸಿದ್ದು ಸಂತೋಷ್‌ರನ್ನು ಗೊಂದಲಕ್ಕೀಡು ಮಾಡಿತ್ತು. ಹಾಸಿಗೆಗಳ ಅಲಭ್ಯತೆ ಅವರ ಮಟ್ಟಿಗೆ ಸ್ವಂತ ಅನುಭವ ಕೂಡಾ.  ಕೋವಿಡ್ ಬಾಧಿತರಾಗಿದ್ದ ಸಂತೋಷ್ ಅವರ ಸಂಬಂಧಿಯೊಬ್ಬರು 16 ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತೆರಳಿದರೂ ಪ್ರವೇಶ ದೊರೆಯದೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

“ನಾನು 150 ಆಸ್ಪತ್ರೆಗಳವರ ಜೊತೆ ಮಾತನಾಡಿದ್ದೇನೆ. ಅಷ್ಟೇ ಅಲ್ಲ ಚಿಕಿತ್ಸೆ ಪಡೆಯಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ರೋಗಿಗಳ ಕತೆಗಳನ್ನೂ ಕೇಳಿದ್ದೇನೆ. ಸರ್ಕಾರ ಹೇಳುತ್ತಿರುವಷ್ಟು ಸಂಖ್ಯೆಯ ಹಾಸಿಗೆಗಳು ಲಭ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದು” ಎಂದು ಸಂತೋಷ್ ಅಭಿಪ್ರಾಯ ಪಡುತ್ತಾರೆ.

ಬೆಂಗಳೂರಿನಲ್ಲಿ ಕೋವಿಡ್ ಬಾಧಿತರಿಗೆ ಲಭ್ಯವಿರುವ ಹಾಸಿಗೆಗಳ ಮೊದಲ ಪಟ್ಟಿಯನ್ನು ಸರ್ಕಾರ  ಬಿಡುಗಡೆ ಮಾಡಿದಾಗಲೇ ಸಂತೋಷ್ ತಮ್ಮ ಸಮೀಕ್ಷೆಯನ್ನೂ ಆರಂಭಿಸಿದ್ದರು. ಜುಲೈ 5ರಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರು ಬಿಡುಗಡೆ ಮಾಡಿದ ಪಟ್ಟಿಯಲ್ಲಿ 72 ಖಾಸಗಿ ಆಸ್ಪತ್ರೆಗಳಲ್ಲಿ 3331 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿತ್ತು. ಅದರಲ್ಲಿ 2598 ಹಾಸಿಗೆಗಳು ಖಾಲಿ ಇದ್ದವು.

ಜುಲೈ 5ರಂದು ಸರ್ಕಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿದ್ದ 71 ಆಸ್ಪತ್ರೆಗಳ ವೈದ್ಯರು ಅಥವಾ ಆಡಳಿತಾಧಿಕಾರಿಗಳ ಜೊತೆಗೆ ಹಾಸಿಗೆ ಲಭ್ಯತೆಯ ಕುರಿತು ಸಂತೋಷ್ ಅವರೊಂದು ಸಮೀಕ್ಷೆ ನಡೆಸಿದರು.

  • ಸಮೀಕ್ಷೆಯಲ್ಲಿ ಪಾಲ್ಗೊಂಡ 71 ಆಸ್ಪತ್ರೆಗಳಲ್ಲಿ 29 ಆಸ್ಪತ್ರೆಗಳು ತಾವು ಕೋವಿಡ್‌ಗೆ ಚಿಕಿತ್ಸೆ ನೀಡುತ್ತಿಲ್ಲ. ಏಕೆಂದರೆ ಅದಕ್ಕೆ ಬೇಕಿರುವ ವ್ಯವಸ್ಥೆ ಪೂರ್ಣವಾಗಿಲ್ಲ ಎಂದು  ಅವು ಹೇಳಿದ್ದವು.
  • ಸರ್ಕಾರ 3331 ಹಾಸಿಗೆಗಳು ಕೋವಿಡ್‌ ಚಿಕಿತ್ಸೆಗೆ ಮೀಸಲಾಗಿವೆ ಎಂದಾಗ ಲಭ್ಯವಿದ್ದದ್ದು 1676 ಹಾಸಿಗೆಗಳು ಮಾತ್ರ.
  • ಅವುಗಳಲ್ಲಿ ಖಾಲಿ ಇದ್ದ ಹಾಸಿಗೆಗಳ ಸಂಖ್ಯೆ 437 ಮಾತ್ರವಾಗಿತ್ತೇ ಹೊರತು ಸರ್ಕಾರ ಹೇಳಿದಂತೆ 2598 ಆಗಿರಲಿಲ್ಲ.
Covidbeds.org ಜುಲೈ 5ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಸಂಖ್ಯೆಯ ಸಮೀಕ್ಷೆ. ಸಮೀಕ್ಷೆಯ ಪೂರ್ಣ ವಿವರಗಳು ಇಲ್ಲಿವೆ

ಮೊದಲ ಸಮೀಕ್ಷೆಯ ದಿನದಿಂದಲೂ ಕೋವಿಡ್ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಪಟ್ಟಿಯಲ್ಲಿರುವ ಎಲ್ಲಾ ಆಸ್ಪತ್ರೆಗಳನ್ನೂ ನಿರಂತರವಾಗಿ ಸಂಪರ್ಕಿಸಿ ಮಾಹಿತಿ ಪಡೆಯುವ ಚಟುವಟಿಕೆಯನ್ನು ಸಂತೋಷ್ ನಡೆಸುತ್ತಿದ್ದಾರೆ. ಅವರು ಹೇಳುವಂತೆ “ಜುಲೈ 5ರಂದು ನಡೆಸಿದಂತೆ ಈಗ ಒಂದು ಸಮಗ್ರ ಸಮೀಕ್ಷೆ ನಡೆಸುವುದು ಕಷ್ಟ. ಆಸ್ಪತ್ರೆ ಮತ್ತು ರೋಗಿಗಳ ಸಂಖ್ಯೆ ನಿರಂತರ ಬದಲಾಗುತ್ತಿದೆ. ಆದರೂ ಒಂದಂತೂ ಖಚಿತ. ಸರ್ಕಾರದ ಪಟ್ಟಿ ಹೇಳುವಷ್ಟು ಸಂಖ್ಯೆಯ ಹಾಸಿಗೆಗಳಂತೂ ಲಭ್ಯವಿಲ್ಲ”.

ತುಷಾರ್ ಗಿರಿನಾಥ್ ಅವರಂತೆಯೇ ಸಂತೋಷ್ ಕೂಡಾ ಲಭ್ಯವಿರುವ ಹಾಸಿಗೆಗಳ ಸಂಖ್ಯೆ 2000ದಷ್ಟಿರಬಹುದು ಹಾಗೆಯೇ ಖಾಲಿ ಇರುವ ಹಾಸಿಗೆಗಳ ಸಂಖ್ಯೆ 500-600ಕ್ಕಿಂತ ಹೆಚ್ಚಿರಲಾರದು ಎಂದು ಅಂದಾಜಿಸುತ್ತಾರೆ. ವೆಂಟಿಲೇಟರ್ ಸವಲತ್ತಿರುವ ಹಾಸಿಗೆಗಳ ಸಂಖ್ಯೆ ತುಂಬಾ ಕಡಿಮೆ ಎಂದು ಅಭಿಪ್ರಾಯ ಪಡುವ ಅವರು 70 ರಿಂದ 80 ಆಸ್ಪತ್ರೆಗಳಷ್ಟೇ ಕೋವಿಡ್ ಬಾಧಿತರಿಗೆ ಚಿಕಿತ್ಸೆ ನೀಡುತ್ತಿವೆ ಎನ್ನುತ್ತಾರೆ.

ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ದಿನಕ್ಕೆ 1500ರಿಂದ 2500ರಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಚಿಕಿತ್ಸೆಗಾಗಿ ಒಟ್ಟು ಲಭ್ಯವಿರುವ ಹಾಸಿಗೆಗಳ ಸಂಖ್ಯೆ ಕೇವಲ 3500ರಷ್ಟೇ ಇವೆ. ಇವುಗಳಲ್ಲಿ 1500 ಸರ್ಕಾರಿ ಆಸ್ಪತ್ರೆಗಳಲ್ಲಿದ್ಜರೆ 2000 ಹಾಸಿಗೆಗಳು ಖಾಸಗಿಯವರ ಬಳಿ ಇವೆ. ರೋಗಿಗಳ ಸಂಖ್ಯೆ ಮತ್ತು ಚಿಕಿತ್ಸಾ ಮೂಲಸೌಕರ್ಯದ ನಡುವಣ ವ್ಯತ್ಯಾಸ ದೊಡ್ಡದು. ಆದ್ದರಿಂದ ಅನೇಕ ರೋಗಿಗಳಿಗೆ ಚಿಕಿತ್ಸೆಯೇ ದೊರೆಯದಂಥ ವಾತಾವರಣ ಸೃಷ್ಟಿಯಾಗಿರುವುದರಲ್ಲಿ ಆಶ್ಚರ್ಯಪಡುವಂಥದ್ದೇನೂ ಇಲ್ಲ.

Read the original in English here.

Also read:
► Why Bengaluru hospitals are refusing to admit COVID patients
► COVID response: “Bengaluru is overlooking every management lesson from history”
► Battling addiction online: How COVID-19 has changed support groups for alcoholics

Support Citizen Matters - independent, Reader-funded media that covers your city like no other.DONATE
About Siddhant Kalra 24 Articles
Siddhant Kalra is a writer and researcher from Delhi.