ರಸ್ತೆಗುಂಡಿ ಅಫಘಾತ ಸಂತ್ರಸ್ತರಿಗೆ ಪಾಲಿಕೆಯಿಂದ ಪರಿಹಾರ ವಿಳಂಬ! ಪರಿಹಾರ ಧನಕ್ಕೆ ವ್ಯವಸ್ಥಿತ ಕಾರ್ಯಸೂಚಿ ಇಲ್ಲದೆ ಹೈರಾಣಾದ ಸಂತ್ರಸ್ತರು

ರಸ್ತೆಗುಂಡಿ ಅಪಘಾತ ಸಂತ್ರಸ್ತರಿಗೆ ಪರಿಹಾರ

ಹೊಂಡಗಳಂತೆ ಕಾಣುವ ರಸ್ತೆಗುಂಡಿಗಳು ಬೆಂಗಳೂರಿನ ಎಷ್ಟೋ ರಸ್ತೆಗಳಲ್ಲಿ ಇನ್ನೂ ರಾರಾಜಿಸುತ್ತಿವೆ.
ಹೊಂಡಗಳಂತೆ ಕಾಣುವ ರಸ್ತೆಗುಂಡಿಗಳು ಬೆಂಗಳೂರಿನ ಎಷ್ಟೋ ರಸ್ತೆಗಳಲ್ಲಿ ಇನ್ನೂ ರಾರಾಜಿಸುತ್ತಿವೆ.

Translated by Madhusudhan Rao and Pavan

ಅಕ್ಟೋಬರ್ 4 ರಂದು, 33 ವರ್ಷ ವಯಸ್ಸಿನ ಐಟಿ ಉದ್ಯೋಗಿ ವ್ಯಾಸ್ ರವರ (ಹೆಸರು ಬದಲಾಯಿಸಿದೆ) ಸ್ಕೂಟರ್ ಗುಂಡಿಯೊಳಕ್ಕೆ ಬಿದ್ದು, ಮೊಣಕಾಲು  ಮುರಿದುಕೊಳ್ಳಬೇಕಾಯಿತು. ನಂತರ ನಡೆದ ಶಸ್ತ್ರ ಚಿಕಿತ್ಸೆ, ಆಸ್ಪತ್ರೆ ಖರ್ಚು, ಫಿಸಿಯೋಥೆರಪಿ, ಔಷಧಿ ವೆಚ್ಚ, ಗಾಡಿ ರಿಪೇರಿ ಖರ್ಚು ಇವೆಲ್ಲ ರೂ.4,34,323 ಕ್ಕಿಂತ ಹೆಚ್ಚು. ಆತ ಈಗಲೂ ಹಾಸಿಗೆ ಬಿಟ್ಟಿಲ್ಲ.

ವ್ಯಾಸ್ ಪರಿಹಾರದ ಭರವಸೆಯಲ್ಲಿ ಒಂದಾದಮೇಲೊಂದು ಸರ್ಕಾರಿ ಇಲಾಖೆಗಳಿಗೆ ಇಮೇಲ್ ಕಳುಹಿಸುತ್ತಲೇ ಇದ್ದಾರೆ. ಆದ್ರೆ ಜವಾಬು ಮಾತ್ರ ಬಂದಿಲ್ಲ. ಕಾರಣ? ಬಹಳಷ್ಟು ಸಂಖ್ಯೆಯಲ್ಲಿ  ರಸ್ತೆಗುಂಡಿ ಸಂತ್ರಸ್ತರಿದ್ದರೂ, ಬಿ.ಬಿ.ಎಂ.ಪಿ ಅವರಿಗೆ ಪರಿಹಾರ ಒದಗಿಸುವ ವ್ಯವಸ್ಥಿತ ಕಾರ್ಯಸೂಚಿ ಕಲ್ಪಿಸದೆ ಇಲ್ಲದಿರುವುದು ರಸ್ತೆಗುಂಡಿ ಅಪಘಾತ ಸಂತ್ರಸ್ತರಿಗೆ ತಲೆನೋವಾಗಿ ಪರಿಣಮಿಸಿದೆ.  

ಇಲ್ಲಿವರೆಗೂ ಪರಿಹಾರ ಕೇವಲ ಮಹಾಪೌರರ ‘ವಿವೇಚನೆ’ಯ ಮೇರೆಗೆ ಮಾತ್ರ ಸೀಮಿತವಾಗಿದೆ. ಅಲ್ಲದೆ, ಎಷ್ಟು ಜನ ಸಂತ್ರಸ್ತರಿಗೆ ಈಗಿನವರೆಗಿನ ಮಹಾಪೌರರು ಪರಿಹಾರ ಒದಗಿಸಿದ್ದಾರೆ ಅನ್ನುವುದರ ಮಾಹಿತಿ ಕೂಡ ಇಲ್ಲ.

ಈ ವರ್ಷ ಜೂಲೈ ನಲ್ಲಿ, ಕರ್ನಾಟಕದ ಹೈಕೋರ್ಟು ಬಿ.ಬಿ.ಎಂ.ಪಿಗೆ ರಸ್ತೆಗುಂಡಿ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕೆಂದು ಆಜ್ಞೆ ಹೊರಡಿಸಿದೆ. ಆದರೆ ಬಿ.ಬಿ.ಎಂ.ಪಿ ಇನ್ನೂ ಯಾವ ರೀತಿಯ ವ್ಯವಸ್ಥೆಯನ್ನೂ ಮಾಡಿಲ್ಲ.

ದೈಹಿಕ, ಮಾನಸಿಕ ಆಘಾತ, ಅಲ್ಲದೆ ಧನ ಹಾನಿ

ಅಕ್ಟೋಬರ್ 4 ರಂದು ವ್ಯಾಸ್ ಅವರು ಆಫೀಸ್ ನಿಂದ ತೆರಳಿ, ವರ್ತೂರು ರಸ್ತೆಯ ಅಂಡರ್ಬ್ರಿಜ್ ಅಡಿ ಸ್ಕೂಟರ್ ಚಲಿಸುತ್ತಿದ್ದರು. ಅವರ ಪತ್ನಿ ಹಿಂಬದಿ ಸವಾರರಾಗಿ ಕುಳಿತಿದ್ದರು.

ಗಾಡಿಯ ಮುಂದಿನ ಚಕ್ರ ಮಳೆನೀರು ತುಂಬಿದ್ದ ರಸ್ತೆಗುಂಡಿಯಲ್ಲಿ ಇಳಿಯಿತು. ವ್ಯಾಸ್ ಮತ್ತು ಹೆಂಡತಿ ಇಬ್ಬರೂ ಗಾಡಿಯಿಂದ ಬಿದ್ದರು. “ಮಳೆ ಬರುತ್ತಿದ್ದರಿಂದ ನಾನು ಬರೇ 20 ಕಿ.ಮೀ / ಘಂಟೆ ವೇಗದಲ್ಲಿ ಚಲಿಸುತ್ತಿದ್ದೆ. ರಸ್ತೆ ಉಬ್ಬಿನ ತಕ್ಷಣ ಗುಂಡಿ ಇರತ್ತೆ ಅಂತ ನಿರೀಕ್ಷಿಸಿರಲಿಲ್ಲ; ಗಾಡಿ ನಿಯಂತ್ರಣ ತಪ್ಪಿತು.” ವ್ಯಾಸ್ ಹೇಳುತ್ತಾರೆ.

ವ್ಯಾಸ್ ಮತ್ತು ಅವರ ಪತ್ನಿ ಅಂದೇ ಸಾಕ್ರ ಆಸ್ಪತ್ರೆಗೆ ದಾಖಲಾಗಬೇಕಾಯಿತು. “ನನಗೆ ಟೈಟಾನಿಯಂ ಪ್ಲೇಟ್ ಮತ್ತು ಸ್ಕ್ರೂಗಳೊಂದಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ನನ್ನ ಡಿಸ್ಚಾರ್ಜ್ 9 ನೇ ಅಕ್ಟೋಬರ್ ರಂದು ಆಯ್ತು.” ಅವರು ಹೇಳಿದರು. ಅವರ ಹೆಂಡತಿಗೂ ಅಪಘಾತದಿಂದ ಹಲವು ಗಾಯಗಳಾದವು.

ಮೂರು ವರ್ಷದ ಮಗು ಇರುವ ಈ ದಂಪತಿಗಳು ದೈಹಿಕ ಮತ್ತು ಮಾನಸಿಕವಾಗಿ ಆಘಾತಗೊಂಡಿದ್ದು, ಅದರ ಮೇಲೆ ಆರ್ಥಿಕ ನಷ್ಟ ಕೂಡ ಅನುಭವಿಸುತ್ತಿದ್ದಾರೆ.

“ಅಪಘಾತ ಆದಾಗ್ಲಿಂದ, ಮೂರು ವಾರದ ಅನಾರೋಗ್ಯ ರಜೆ (ಸಿಕ್ ಲೀವ್) ಸೇರಿ ನನ್ನ ಎಲ್ಲ ರಜೆಗಳನ್ನೂ ಕಳೆದುಕೊಂಡಿದ್ದೇನೆ. ನವೆಂಬರ್ 29 ರಿಂದ ನನ್ನ ಕಂಪನಿ ವಿಶೇಷ ವಿನಾಯತಿ ಮೇರೆಗೆ ನಾನು ಮನೆಯಿಂದ ಕೆಲಸ ಮಾಡಲು ಒಪ್ಪಿಗೆ ಕೊಟ್ಟಿದೆ. ಆದರೆ ನಾನು ಆಫೀಸಿನಲ್ಲಿ ಉಪಸ್ಥಿತನಿಲ್ಲದಿರುವ ಕಾರಣ ವಾರ್ಷಿಕ ಮೌಲ್ಯಮಾಪನ (ಅಪ್ಪ್ರೈಸಲ್)ದಿಂದ ಹೊರಗುಳಿಯಬೇಕಾಗಿದೆ. ಇದರಿಂದ ನನ್ನ ವೃತ್ತಿಜೀವನದ ಮೇಲೆ ಮುಂದೆ ಪರಿಣಾಮ ಬೀಳುವುದು.” ವ್ಯಾಸ್ ಬಣ್ಣಿಸುತ್ತಾರೆ. 

ರಸ್ತೆಗುಂಡಿ ಅಪಘಾತಗಳು ಬೆಂಗಳೂರಿಗೆ ಹೊಸತೇನಲ್ಲ, ಪ್ರತಿದಿನ ನೂರಾರು ದ್ವಿಚಕ್ರವಾಹನ ಸವಾರರು ರಸ್ತೆಗುಂಡಿ ಕಾಣದೆ, ನಿಯಂತ್ರಣ ತಪ್ಪಿ ಅಪಘಾತವಾಗಿ, ಕೆಲವೊಮ್ಮೆ ಸಾವನ್ನಪ್ಪಿರುವುದನ್ನೂ ನೋಡಿದ್ದೇವೆ. ಅದು ವರ್ತೂರು-ಗುಂಜೂರು ರಸ್ತೆಯ ದುಸ್ಥಿತಿಯ ಕಾರಣ ಗಾಯಗೊಂಡ ತಾಯಿ ಮತ್ತು ಮಗುವಿನ ಕಥೆಯಿರಬಹುದು ಅಥವಾ ಕಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿ ಅರೆಮುಚ್ಚಿದ ಚರಂಡಿಯನ್ನು ದಾಟಲು ಯತ್ನಿಸಿ ಪ್ರಾಣ ತ್ಯಜಿಸಿದ 22 ವರ್ಷದ ಯುವಕನ ಕಥೆಯಿರಬಹುದು.

ಪರಿಹಾರಕ್ಕಾಗಿ ಹೋರಾಟ

ವ್ಯಾಸ್ ರವರಿಗೆ ತನ್ನ ಆರ್ಥಿಕ ಹೊರೆ ಕಮ್ಮಿಯಾದೀತೆಂದು ಭರವಸೆ ಇದ್ದಿದ್ದು, ಕೋರ್ಟ್ ಬಿ.ಬಿ.ಎಂ.ಪಿ ಗೆ ರಸ್ತೆಗುಂಡಿ ಅಪಘಾತ ಸಂತ್ರಸ್ತರಿಗೆ ಪರಿಹಾರ ಕೊಡಲು ಆದೇಶಿಸಿದ್ದರಿಂದ. ಅವರು ಸಾಧ್ಯವಾದಷ್ಟು ಅಧಿಕಾರಿಗಳಿಗೆ ಪರಿಹಾರದ ಮನವಿ ಕಳುಹಿಸಿರುವುದಾಗಿ ಹೇಳುತ್ತಾರೆ. 

“ರಸ್ತೆಗುಂಡಿಯ ಕುರಿತ ಕಡತಗಳು , ಎಫ್.ಐ.ಆರ್ ಕಾಪಿ, ಡಿಸ್ಚಾರ್ಜ್ ಸಾರಾಂಶ ಮತ್ತು ಆಸ್ಪತ್ರೆ ರಸೀದಿ  – ಎಲ್ಲ ಸಂಬಂಧಿತ ದಾಖಲೆಗಳನ್ನು ಬಿ.ಬಿ.ಎಂ.ಪಿ ಅಧಿಕಾರಿಗಳಿಗೆ ಕಳಿಸಿದ್ದೇನೆ. ಆದರೆ, ನಾನಿರುವ ಪರಿಸ್ಥಿತಿ ಮತ್ತು ಆರ್ಥಿಕ ದುಸ್ಥಿತಿಯನ್ನು ಅವರಿಗೆ ಸಮಜಾಯಿಸಿದ ಮೇಲೂ, ಯಾರಿಂದಲೂ ಉತ್ತರ ಬಂದಿಲ್ಲ.” ಎಂದು ಹೇಳುತ್ತಾರೆ.

ಮೇಯರ್ ರವರ ‘ಡಿಸ್ಕ್ರೀಷನರಿ ಫಂಡ್’ ನಿಂದ ಪರಿಹಾರ

ಬಿ.ಬಿ.ಎಂ.ಪಿ ಯ ಹಿರಿಯ ಅಧಿಕಾರಿಯೊಬ್ಬರು ಪರಿಹಾರವನ್ನು ಕುರಿತು ಹೈಕೋರ್ಟ್ ಆದೇಶವನ್ನು ಒಪ್ಪುತ್ತಾರೆ. ತಮ್ಮ ಹೆಸರನ್ನು ಹೇಳ ಬಯಸದ ಇವರು  “ನಿಜ ಹೇಳ್ಬೇಕಂದ್ರೆ, ಅಪ್ಲೈ ಮಾಡೋಕ್ಕೆ ವ್ಯವಸ್ಥಿತ ಮಾರ್ಗದ ಮಾತು ಹಾಗಿರಲಿ, ರಸ್ತೆಗುಂಡಿ ಸಂತ್ರಸ್ತರಿಗೆ ಮೀಸಲಾದ ಪರಿಹಾರ ನಿಧಿ ಎಂದೂ ಇರಲೇ ಇಲ್ಲ.”

ಇಲ್ಲಿಯವರೆಗೂ, ಬಿ.ಬಿ.ಎಂ.ಪಿ ಮಹಾಪೌರರು ಆಗೊಮ್ಮೆ ಈಗೊಮ್ಮೆ ಸಂತ್ರಸ್ತರ ನಷ್ಟ ಭರಿಸಲು ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅದು ಸಾಮಾನ್ಯವಾಗಿ ಘಟನೆಯ ಬಗ್ಗೆ ಕಾರ್ಪೊರೇಟರ್ ಗಳಿಂದಲೋ, ನ್ಯಾಯಾಯಲದ ತೀರ್ಪಿನಿಂದನಿಂದಲೋ, ಶಾಸಕರಿಂದಲೋ ಅಥವಾ ಮೀಡಿಯಾ ವರದಿಗಳಿಂದಲೋ ತಿಳಿದುಕೊಂಡಮೇಲೆ.

ಮಹಾಪೌರರ ‘ಡಿಸ್ಕ್ರೀಷನರಿ ಫಂಡ್’ ನಿಂದ ಬಿ.ಬಿ.ಎಂ.ಪಿ ಯ ಮೂಲ ಸೌಕರ್ಯಗಳ ಕೊರತೆಯಿಂದ ಗಾಯ ಅಥವಾ ಮೃತ್ಯು ಸಂಭವಿಸಿದರೆ, ಸಂತ್ರಸ್ತರಿಗೆ ಅಥವಾ ಅವರ ಕುಟುಂಬದವರಿಗೆ ಪರಿಹಾರ ನೀಡಲಾಗುತ್ತೆ. ಇದೇ ಧನರಾಶಿಯಿಂದ ರಸ್ತೆ ಕಾಮಗಾರಿಯ ಖರ್ಚು-ವೆಚ್ಚಗಳು ಮತ್ತು ಅನಿರೀಕ್ಷಿತ ಖರ್ಚುಗಳನ್ನೂ ಪೂರೈಸಲಾಗುತ್ತೆ.

ಆದರೆ, ಸಂತ್ರಸ್ತರಿಗೆ ಮಾತ್ರ ಯಾವ ಪರಿಹಾರ ಮೊತ್ತವೂ ನಿಗದಿ ಮಾಡಿಲ್ಲ. “ಪರಿಹಾರ ಮೊತ್ತ ಬದಲಾಗುತ್ತ ಇರತ್ತೆ. ಒಂದು ವೇಳೆ ರಸ್ತೆಗುಂಡಿ, ಫುಟ್ಪಾತ್ ಅಥವಾ ಮರ ಕುಸಿತ ಇವುಗಳಿಂದ ಗಾಯ ಗೊಂಡಿದ್ದರೆ, ‘ಡಿಸ್ಕ್ರೀಷನರಿ ಫಂಡ್’ ಅನ್ನು ಸಂತ್ರಸ್ತರ ಆಸ್ಪತ್ರೆ ಖರ್ಚು ಭರಿಸುವುದಕ್ಕೆ ಮಾತ್ರ ಉಪಯೋಗಿಸುತ್ತಾರೆ. ಅದರ ಹೊರತಾಗಿ, ಬಿ.ಬಿ.ಎಂ.ಪಿ ಇಂದ ಆರ್ಥಿಕ ಅಥವಾ ಮಾನಸಿಕ ಯಾತನೆಗೆ ಪರಿಹಾರ ಕೋರಲು ಯಾವ ವ್ಯವಸ್ಥೆಯೂ ಇಲ್ಲ.” ಎಂದು ಹಿರಿಯ ಅಧಿಕಾರಿ ಹೇಳುತ್ತಾರೆ.

ಸಂತ್ರಸ್ತರು ಮೃತ ಪಟ್ಟಿದ್ದರೆ, ಮಹಾಪೌರರು ವಯಸ್ಸು, ಲಿಂಗ, ಕುಟುಂಬದ ಸದಸ್ಯರ ಸಂಖ್ಯೆ, ಕುಟುಂಬದ ಆರ್ಥಿಕ ಪರಿಸ್ಥಿತಿ – ಇವುಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಮೊತ್ತ ನಿಗದಿ ಮಾಡುತ್ತಾರೆ. “ಉದಾಹರಣೆಗೆ, ಕುಟುಂಬವನ್ನು ಪೋಷಿಸುತ್ತಿರುವವರು ಮೃತಪಟ್ಟಲ್ಲಿ ಅವರಿಗೆ ಪರಿಹಾರದ ಮೊತ್ತ ಹೆಚ್ಚಿರುತ್ತದೆ. ಅದೇ ವೃದ್ದರು, ವಯಸ್ಸಾದವರಿಗೆ ಅಫಘಾತ ಸಂಭವಿಸಿದ್ದಲ್ಲಿ ಪರಿಹಾರದ ಮೊತ್ತ ಸಣ್ಣದಿರುತ್ತದೆ..” ಅವರು ಹೇಳುತ್ತಾರೆ..

ರಸ್ತೆಗುಂಡಿ ಅಪಘಾತಕ್ಕಾಗಿ ಮಹಾಪೌರರಿಂದ ಪರಿಹಾರ ಪಡೆದುಕೊಂಡ ಸಂತ್ರಸ್ತರ ಖಚಿತ ಸಂಖ್ಯೆ ಬಗ್ಗೆ ಮಾಹಿತಿ ಇಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ. “ರಸ್ತೆಗುಂಡಿ ಅಪಘಾತವಿರಲಿ, ಮರ ಕುಸಿತವಿರಲಿ, ಪ್ರವಾಹ ಇನ್ನಿತರ ತೊಂದರೆಗಳಾಗಲಿ, ‘ಮಧ್ಯಂತರ ಪರಿಹಾರ’ ಅಥವಾ ಅಂಥದ್ದೇ ಸೂಕ್ತಿಯನ್ನು ಸಂತ್ರಸ್ತರ ಹೆಸರಿನ  ಮುಂದೆ ಬರೆಯಲಾಗುತ್ತೆ. ಸರಿಯಾದ ಕಾರಣವನ್ನು, ಪರಿಸ್ಥಿತಿಯನ್ನು ಉಲ್ಲೇಖಿಸುವುದಿಲ್ಲ” ಅವರು ಹೇಳುತ್ತಾರೆ.

ಪರಿಹಾರ ಕುರಿತು ಬಿ.ಬಿ.ಎಂ.ಪಿ  ಜಾಹಿರಾತು

ಕರ್ನಾಟಕ ಉಚ್ಚ ನ್ಯಾಯಾಲಯವು ಜೂಲೈನಲ್ಲಿ ನೀಡಿದ ತೀರ್ಪಿನ ನಂತರವೂ ಬಿ.ಬಿ.ಎಂ.ಪಿ ಬಹುತೇಕವಾಗಿ ಈ ವಿಷಯದಲ್ಲಿ ಮೌನ ತಾಳಿತ್ತು. ನವೆಂಬರ್ 12 ರಂದು ಹೈಕೋರ್ಟು ಬಿ.ಬಿ.ಎಂ.ಪಿಯ ತಾತ್ಸಾರವನ್ನು ಕುರಿತು, ಪಾಲಿಕೆ ಪರಿಹಾರ ಕೊಡದೇ ಹೋದರೆ ಅಥವಾ ವ್ಯವಸ್ಥೆಯ ಬಗ್ಗೆ ಪ್ರಚಾರ ಮಾಡದೇ ಹೋದರೆ, ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆಯನ್ನೂ ಹಾಕಿತ್ತು.  

ಅದಾದ ನಂತರ, 27 ನವೆಂಬರ್ ರಂದು, ಬಿ.ಬಿ.ಎಂ.ಪಿ ದಿನಪತ್ರಿಕೆಗಳಲ್ಲಿ ಜಾಹಿರಾತು ಹೊರಡಿಸಿ ರಸ್ತೆಗುಂಡಿ ಸಂತ್ರಸ್ತರಿಗೆ ಪರಿಹಾರ ನೀಡುವುದಾಗಿ ಹೇಳಿತ್ತು. 

ದಿನಪತ್ರಿಕೆಗಳಲ್ಲಿ ಬಿ.ಬಿ.ಎಂ.ಪಿ ಕೊಟ್ಟ ಜಾಹಿರಾತು
ದಿನಪತ್ರಿಕೆಗಳಲ್ಲಿ ಬಿ.ಬಿ.ಎಂ.ಪಿ ಕೊಟ್ಟ ಜಾಹಿರಾತು

ಹಿಂದಿನ ಶುಕ್ರವಾರ, ಬಿ.ಬಿ.ಎಂ.ಪಿ ವಕೀಲರಾದ ಕೆ. ಏನ್.ಪುಟ್ಟೇಗೌಡ ಅವರು ಸಲ್ಲಿಸಿದ ಅಫಿಡವಿಟ್ ನಲ್ಲಿ ನ್ಯಾಯಾಲಯದ ತೀರ್ಪಿನ ಅನುಸಾರವಾಗಿ ಪತ್ರಿಕೆಗಳಲ್ಲಿ ಜಾಹಿರಾತುಗಳು ನೀಡಲಾಗಿದೆ ಎಂದು ಹೇಳಲಾಗಿತ್ತು. ಬಿ.ಬಿ.ಎಂ.ಪಿ ಯು ಹೈಕೋರ್ಟ್ ಆರ್ಡರ್ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ‘ವಿಶೇಷ ಮೇಲ್ಮನವಿ’ ಸಲ್ಲಿಸಿದೆ ಎಂದೂ ಉಲ್ಲೇಖಿಸಲಾಗಿದೆ. 

ಅಷ್ಟರಲ್ಲಿ, ವ್ಯಾಸ್ ರವರಿಗೆ ಯಾವ ಅಧಿಕಾರಿಗಳಿಂದಲೂ ಇನ್ನೂ ಸುದ್ದಿ ಬಂದಿಲ್ಲ. “ಪ್ರತಿಕೂಲ ಹವಾಮಾನವಿಲ್ಲದಿದ್ದರೆ, ಬೀದಿ ದೀಪಗಳಿದ್ದಿದ್ದರೆ, ನಾವು ನಮ್ಮ ಜೀವನ ಸುಗಮವಾಗಿ ನಡೆಸಿಕೊಂಡು ಹೋಗುತ್ತಿದ್ದೆವು. ಸದ್ಯಕ್ಕೆ, ನಮ್ಮ ಅಫಘಾತದಿಂದಾದ ನನ್ನ ಆರ್ಥಿಕ ಸಮಸ್ಯೆಗಳಿಗೆ ಕಡೆಗಾಣುತ್ತಿಲ್ಲ. ನಾನು ಕುಟುಂಬಕ್ಕೆ ದುಡಿದು ಹಾಕುವುದಿರಲಿ, ನನ್ನ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಆರ್ಥಿಕ ಹೊರೆಯಿಂದ ನನ್ನ ಇಡೀ ಸಂಸಾರ ತತ್ತರಿಸುತ್ತಿದೆ.” ಅವರು ಹೇಳುತ್ತಾರೆ.

ಅವರು ತನ್ನ ನೌಕರಿಯ ಭದ್ರತೆಯ ಬಗ್ಗೆಯೂ ಚಿಂತಿತರಾಗಿದ್ದಾರೆ. “ಎಲ್ಲರೂ ಬೆಂಗಳೂರಿಗೆ ಬದುಕು ಕಟ್ಟೋಕೆ ಬರ್ತಾರೆ. ಆದರೆ, ಮೂಲ ಸೌಕರ್ಯಗಳ ಕೊರತೆಯಿಂದ ಈರೀತಿ ದುಷ್ಪರಿಣಾಮಗಳಾದರೆ, ಭಯ ಹುಟ್ಟುತ್ತೆ. ಇದು ಯಾರಿಗೆ ಬೇಕಾದ್ರೂ ಆಗಬಹುದು. ವಿಪರ್ಯಾಸವೆಂದರೆ, ಆಡಳಿತಾಧಿಕಾರಿಗಳು ಸಮಸ್ಯೆ ಬಗೆಹರಿಸಲು ಯಾವುದೇ ವ್ಯವಸ್ಥಿತ ಮಾರ್ಗ ಸೂಚಿಸಿಲ್ಲ.” ಎಂದು ಹೇಳುತ್ತಾರೆ.

ಮಾಧ್ಯಮಗಳೊಂದಿಗೆ ಮಾತಾಡುತ್ತ, ಬಿ.ಬಿ.ಎಂ.ಪಿ ಆಯುಕ್ತರಾದ ಬಿ.ಎಚ್.ಅನಿಲ್ ಕುಮಾರ್ ಅವರು ರಸ್ತೆಗುಂಡಿ ಸಂತ್ರಸ್ತರ ವಿಚಾರಗಳನ್ನು ತಾತ್ಕಾಲಿಕವಾಗಿ ಆಯಾ ಪ್ರಕರಣಕ್ಕೆ ಅನುಗುಣವಾಗಿ ಪರಿಗಣಿಸಿ, ಪರಿಹಾರ ನೀಡಲಾಗುವುದು ಎಂದರು. ಆದರೆ, ಸಂತ್ರಸ್ತ ನಾಗರೀಕರು ಸುಲಭವಾಗಿ ಪರಿಹಾರ ಕೋರಬಹುದಾದ ವ್ಯವಸ್ಥೆಗೆ ಬೇಕಾದ ಸೂತ್ರಗಳನ್ನು ಬಿ.ಬಿ.ಎಂ.ಪಿ ಇನ್ನೂ ಸ್ಪಷ್ಟೀಕರಿಸಿಲ್ಲ ಎಂದು ಹೇಳಿದರು. 

ಈ ಹಿರಿಯ ಅಧಿಕಾರಿಯ ಪ್ರಕಾರ, ಈ ಸೂತ್ರಗಳನ್ನು ಸ್ಪಷ್ಟೀಕರಿಸುವ ಕಾರ್ಯ ಆರಂಭವಾಗಿದೆಯಾದರೂ, ಸೂಕ್ತ ಪರಿಹಾರ ಕೋರುವ ವ್ಯವಸ್ಥೆ ಜಾರಿಗೊಳ್ಳಲು ಇನ್ನೂ ಕನಿಷ್ಠ ಮೂರು ತಿಂಗಳು ಹಿಡಿಯಬಹುದು.

ಬಿ.ಬಿ.ಎಂ.ಪಿ ರಸ್ತೆಗುಂಡಿಗಳನ್ನು ಮುಚ್ಚುತ್ತಿದೆಯೇ?

ಮೂಲ ಸೌಕರ್ಯಗಳ ಭೀಕರ ನಿರ್ಲಕ್ಷ್ಯದಿಂದ ಮತ್ತೆ ಮತ್ತೆ ಸಂಭವಿಸುತ್ತಿರುವ ಅಪಘಾತ ಮತ್ತು ಮೃತ್ಯುಗಳು ಬೆಂಗಳೂರು ವಾಸದ ಜೊತೆಗೆ ಹಾಸುಹೊಕ್ಕಾಗಿ ಬರುವ ಪಿಡುಗುಗಳೆಂದು ಪರಿಗಣಿಸಲಾಗುತ್ತಿದೆ. ಇಂತಹ ಘಟನೆಗಳ ನಂತರ, ಬಿ.ಬಿ.ಎಂ.ಪಿ ಅದೊಂದು ಕಪ್ಪುಚುಕ್ಕೆಯನ್ನು ಸರಿಪಡಿಸುವುದಕ್ಕೆ ಅಥವಾ ಯಾವುದೋ ಒಂದು ಬೀದಿಯನ್ನು ರಸ್ತೆಗುಂಡಿ-ಮುಕ್ತವಾಗಿಸಲು ಮಾತ್ರ ಮುಂದಾಗುತ್ತದೆಯೇ ಹೊರತು, ಒಂದು ಸುಸ್ಥಿರ ಪರಿಹಾರ ಕೊಡಲೆತ್ನಿಸುತ್ತಿಲ್ಲವೆಂದು ಅನಿಸುತ್ತದೆ.

ಪಿ.ಐ.ಎಲ್ ಅನ್ನು ಆಲಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ ಬಿ.ಬಿ.ಎಂ.ಪಿ ಯನ್ನು ರಸ್ತೆಗುಂಡಿ ಅಪಘಾತಗಳಿಗೆ, ಮೃತ್ಯುಗಳಿಗೆ ಹೊಣೆಗಾರರಾಗಿ ಪರಿಗಣಿಸಬಹುದಾಗಿ ಕೂಡಾ ಹೇಳಿತ್ತು. ನಂತರ, ಪಾಲಿಕೆಯು ನವೆಂಬರ್ 10 ರೊಳಗೆ 1344 ಕಿ.ಮೀ ಮೀರಿದ ಅಳತೆಯುಳ್ಳ 470 ಮುಖ್ಯ ರಸ್ತೆಗಳಲ್ಲಿನ  ಗುಂಡಿಗಳನ್ನು ಮುಚ್ಚುವುದಾಗಿ ಹೇಳಿಕೆ ಕೊಟ್ಟು, ಅದು ಸುಧಾರಿಸುತ್ತಿದೆ ಎಂದು ಪಾಲಿಕೆ ಬೆಂಗಳೂರಿಗರನ್ನು ಹೆಚ್ಚು-ಕಡಿಮೆ ನಂಬಿಸಿತು. ಬಿ.ಬಿ.ಎಂ.ಪಿ ಖುದ್ದಾಗಿ ನಡೆಸಿದ ಸಮೀಕ್ಷೆ ಪ್ರಕಾರ, ಅಕ್ಟೋಬರ್ 1 ರಿಂದ 10ರ ನಡುವೆ, ಈ ರಸ್ತೆಗಳಲ್ಲಿ 10,656 ಗುಂಡಿಗಳಿದ್ದವು. ನವೆಂಬರ್ 10ರಂದು, ಮುಚ್ಚಲು ಮಿಕ್ಕಿರುವ ಗುಂಡಿಗಳು ಬರೇ 742 ಎಂದು ಬಿ.ಬಿ.ಎಂ.ಪಿ ಘೋಷಿಸಿತು. 

ಇತ್ತೀಚಿಗೆ, ನವೆಂಬರ್ 27ರಂದು, ಬಿ.ಬಿ.ಎಂ.ಪಿ ವೆಬ್ಸೈಟ್ ಮಾಹಿತಿ ಪ್ರಕಾರ ಬರೇ 327 ಮುಖ್ಯರಸ್ತೆಗಳ ಗುಂಡಿಗಳು ಮುಚ್ಚಲು ಮಿಕ್ಕಿವೆ. ಆದರೆ, ಹಲವಾರು ಸಣ್ಣ ರಸ್ತೆಗಳು ದುಸ್ಥಿತಿಯಲ್ಲಿರುವುದರಿಂದ, ಅಂತರ್ಜಾಲ ತಾಣಗಳಲ್ಲಿ ದೂರುಗಳ ಸುರಿಮಳೆ ಮುಂದುವರೆಯುತ್ತಿದೆ. 

ಬೆಂಗಳೂರಿನ ನಿವಾಸಿಗಳಿಗೆ ರಸ್ತೆಗುಂಡಿಗಳು ಯಮಕಿಂಕರರಂತೆ ಕಾಡುತ್ತಿವೆ. ಅಲ್ಲದೆ, ವ್ಯಾಸ್ ರಂತ ಸಂತ್ರಸ್ತರ ಪಾಡು ಹೇಳತೀರವಾಗಿದೆ. 

Read the original in English here.

About our volunteer translators

Madhusudhan Rao is a long-time resident of South Bengaluru. He works in the IT sector, but dabbles in other passions from time to time, mainly centred around volunteering, teaching and language.

Pavan is a resident of Sanjaynagar and works with a corporate company. He is especially interested in issues of public concern.

Support Citizen Matters - independent, Reader-funded media that covers your city like no other.DONATE
About Harsha Raj Gatty 26 Articles
Harsha Raj Gatty is Editor and Co-founder of StoryInfinity news agency (Subs and Scribes Media Ventures LLP).