ಬಿಎಂಟಿಸಿ ಮರು ಪ್ರಾರಂಭಿಸಿದ ವಿದ್ಯಾರ್ಥಿ ಬಸ್ ಪಾಸ್ ಸೇವೆ ಕುರಿತ ಸಮಗ್ರ ವಿವರ: ಆನ್ ಲೈನ್ ಅರ್ಜಿ ಸಲ್ಲಿಕೆಯಿಂದ ಹಿಡಿದು ಸಂಗ್ರಹದವರೆಗ

ವಿದ್ಯಾರ್ಥಿಗಳ ಆನ್ ಲೈನ್ ಬಸ್ ಪಾಸ

Pic: Wikipedia

Translated by Chamaraj Savadi

ಕಳೆದ ವರ್ಷದ ವಿಫಲ ಪ್ರಯತ್ನದ ನಂತರ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ನಿಗಮ) ವಿದ್ಯಾರ್ಥಿಗಳ ಆನ್‍ ಲೈನ್ ಬಸ್ ಪಾಸ್ ಸೇವೆಯನ್ನು ಪುನಃ ಪ್ರಾರಂಭಿಸಿದೆ. ಇನ್ನು ಮುಂದೆ, ವಿದ್ಯಾರ್ಥಿಗಳ ಬಸ್ ಪಾಸ್ ಅರ್ಜಿ ಸಂಸ್ಕರಣ ಸೇವೆಯು ಸಂಪೂರ್ಣ ಆನ್ ಲೈನ್ ಆಗಿದ್ದು, ಅರ್ಜಿ ಫಾರ್ಮ್ ಗಳ ದೈಹಿಕ ಪ್ರತಿಗಳು ಸಿಗುವುದಿಲ್ಲ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಕ್ ಎನ್. ತಿಳಿಸಿದ್ದಾರೆ.

ಬಸ್ ಪಾಸ್ ನ ಸ್ಮಾರ್ಟ್ ಕಾರ್ಡ್ ಅನ್ನು ಆನ್‍ ಲೈನ್ ಮೂಲಕ ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಯ ಭಾವಚಿತ್ರ, ಹೆಸರು, ಹಾಗೂ ವಿದ್ಯಾರ್ಥಿಯ ವಿಶಿಷ್ಟ ಗುರುತಿನ ಸಂಖ್ಯೆ, ಶಾಲೆಗೆ ಬಂದು ಹೋಗುವ ಬಸ್ ಮಾರ್ಗದ ವಿವರ ಹಾಗೂ ಕಾರ್ಡ್ ನ ಬಳಕೆ ಅವಧಿಯ ವಿವರಗಳನ್ನೊಳಗೊಂಡ ಎಲೆಕ್ಟ್ರಾನಿಕ್ ಚಿಪ್ ಸ್ಮಾರ್ಟ್ ಕಾರ್ಡ್ ಹೊಂದಿದೆ.

ಈ ಸಲ ಹೊಸತೇನಿದೆ?

ಕಳೆದ ವರ್ಷದಂತೆ ಈ ಸಲ ಬಸ್ ಪಾಸ್ ಅನ್ನು ಬಿಎಂಟಿಸಿಯು ವಿದ್ಯಾರ್ಥಿಗಳ ವಿಳಾಸಕ್ಕೆ ಪೋಸ್ಟ್ ಮೂಲಕ ಕಳಿಸುವುದಿಲ್ಲ. ಬದಲಾಗಿ, ನಗರಾದ್ಯಂತ 26 ಸ್ಥಳಗಳಲ್ಲಿರುವ 90 ಕೌಂಟರ್ ಗಳಲ್ಲಿ ಹಾಗೂ ಟಿಟಿಎಂಸಿ (ಸಂಚಾರ ಹಾಗೂ ಸಾಗಣೆ ನಿರ್ವಹಣಾ ಕೇಂದ್ರ) ಕೇಂದ್ರಗಳಲ್ಲಿ ಬಸ್ ಪಾಸ್ ಗಳನ್ನು ವಿತರಿಸಲಾಗುವುದು. ತಮಗೆ ಬೇಕೆನಿಸುವ ವಿತರಣಾ ಕೇಂದ್ರ ಹಾಗೂ ಸಮಯದಲ್ಲಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಲು ‘ಸಮಯಾವಕಾಶ ನೋಂದಣಿ ವ್ಯವಸ್ಥೆ’ ಮೂಲಕ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಪಾಸ್ ವಿತರಣಾ ಕೇಂದ್ರಗಳ ಸಮಗ್ರ ಪಟ್ಟಿಯನ್ನು ಇಲ್ಲಿ ಪಡೆದುಕೊಳ್ಳಬಹುದು. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರಿ ದತ್ತಾಂಶ ಸಂಗ್ರಹವಾದ ಎಸ್..ಟಿ.ಎಸ್. (ವಿದ್ಯಾರ್ಥಿ ಜಾಡು ವ್ಯವಸ್ಥೆ) ಮೂಲಕ ವಿದ್ಯಾರ್ಥಿಗಳ ವಿವರಗಳನ್ನು ಬಿಎಂಟಿಸಿ ಸಂಗ್ರಹಿಸುತ್ತದೆ. ಕಳೆದ ವರ್ಷ ಎಸ್‍..ಟಿ.ಎಸ್. ನಲ್ಲಿದ್ದ ವಿದ್ಯಾರ್ಥಿಗಳ ವಿಳಾಸದ ವಿವರಗಳು ವಿದ್ಯಾರ್ಥಿಗಳ ನೈಜ ವಿಳಾಸಗಳ ಜೊತೆಗೆ ಹೊಂದಿಕೆಯಾಗಿರಲಿಲ್ಲ. ಹೀಗಾಗಿ, ವಿದ್ಯಾರ್ಥಿಗಳಿಗೆ ಪಾಸ್ ತಲುಪಿಸುವ ವಿಷಯದಲ್ಲಿ ಸಮಸ್ಯೆಗಳಾಗಿದ್ದವು,”ಎನ್ನುತ್ತಾರೆ ದೀಪಕ್.

ಅಲ್ಲದೇ ಪಾಸ್ ಗಳನ್ನು ಪಡೆಯಲು ಆನ್ ಲೈನ್ ಮೂಲಕ ಪಾವತಿ ಮಾಡುವ ವ್ಯವಸ್ಥೆಯೂ ಕಳೆದ ವರ್ಷ ಇದ್ದಿಲ್ಲ. ಈ ಸಲ ಪಾಸ್ ಗಳನ್ನು ಖುದ್ದಾಗಿ ಪಡೆದುಕೊಳ್ಳುವಾಗ ವಿದ್ಯಾರ್ಥಿಗಳು ನಗದು ಪಾವತಿಸಬೇಕಿದೆ.

ಕಳೆದ ವರ್ಷ, ಅರ್ಜಿಗಳ ಸಂಸ್ಕರಣೆಯಲ್ಲಿ ಹಲವಾರು ತಾಂತ್ರಿಕ ದೋಷಗಳು ತಲೆದೋರಿದ್ದವು. ಆ ಸಮಯದಲ್ಲಿ, ಸುಮಾರು 70,000 ಅರ್ಜಿಗಳನ್ನು ಸಂಸ್ಕರಿಸಲು ನಿಗಮವು ವಿಫಲವಾಗಿತ್ತು. ಆನ್ ಲೈನ್ ಗೇಟ್ ವೇ ಪಾವತಿ ವ್ಯವಸ‍್ಥೆಯಲ್ಲಿ ವಿಳಂಬ, ಅರ್ಜಿಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಅಸಮರ್ಥರಾಗಿದ್ದು ಹಾಗೂ ಶೈಕ್ಷಣಿಕ ಸಂಸ್ಥೆಗಳ ಅಸಹಕಾರದಿಂದ ಸೇವೆಗಳನ್ನು ಒದಗಿಸಲು ವಿಳಂಬವಾಗಿತ್ತು ಎಂದು ಬಿಎಂಟಿಸಿ ಕಾರಣ ಹೇಳಿತ್ತು.

ಅದಾಗ್ಯೂ, ಈ ಸಲ ತಳಮಟ್ಟದಿಂದ ದೋಷಗಳನ್ನು ಸರಿಪಡಿಸಿ ಹೊಸ ತಂತ್ರಜ್ಞಾನವನ್ನು ನಿಗಮ ಅಭಿವೃದ್ಧಿಪಡಿಸಿದೆ ಎಂದಿದ್ದಾರೆ ದೀಪಕ್. ‘ಸುಮಾರು ಎರಡು ತಿಂಗಳ ಕಾಲ ತಂತ್ರಜ್ಞಾನವನ್ನು ಪರೀಕ್ಷಿಸಲಾಗಿದೆ’ ಎನ್ನುತ್ತಾರೆ ಅವರು.

ಪತ್ರಿಕಾ ಹೇಳಿಕೆ ಪ್ರಕಾರ, 1 ರಿಂದ 10ನೇ ತರಗತಿ, ಪಿಯುಸಿ ಮತ್ತು ಕೆಲವು ವಿಶೇಷ ಶಾಲೆಗಳ ವಿದ್ಯಾರ್ಥಿಗಳು ಜೂನ್ ಮೊದಲ ವಾರದಿಂದಲೇ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ. ಪದವಿ ಮತ್ತು ವೃತ್ತಿಪರ ಕಾಲೇಜುಗಳಿಗೆ ಜುಲೈನಿಂದ ಹಾಗೂ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಗಸ್ಟ್ ನಿಂದ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಬಿಎಂಟಿಸಿ ಬಸ್ ಪಾಸ್ ಅಪ್ಲಿಕೇಶನ್ ಪುಟದಲ್ಲಿ, ಈ ವಿಧಾನವನ್ನು ಹಂತಹಂತವಾಗಿ ಅನುಸರಿಸಿ.

 • ಹಳೆಯ ಪಾಸ್ ಗಳ ನವೀಕರಣಕ್ಕಾಗಿ:

* ಆಯ್ಕೆ ಮಾಡಿದ ಪಾಸ್ ನೀಡಿಕೆ ಕೌಂಟರ್ ಗೆ ಹಳೆಯ ಕಾರ್ಡ್ ತಂದು ಸಿಂಧುತ್ವ ಅವಧಿ, ಮಾರ್ಗದ ವಿವರ, ಇತ್ಯಾದಿಗಳನ್ನು ಬದಲಿಸಿಕೊಳ್ಳಿ

 • ಹೊಸ ಪಾಸ್ ನೀಡಿಕೆಗೆ: ಈ ಪ್ರಕ್ರಿಯೆ ಹಳೆಯ ಪಾಸ್ ಗಳನ್ನು ಕಳೆದುಕೊಂಡವರಿಗೂ ಅನ್ವಯವಾಗುತ್ತದೆ

* ಆನ್ ಲೈನ್ ಮೂಲಕ ಹೊಸ ಪಾಸ್ ಗೆ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಆಯ್ದುಕೊಳ್ಳಿ

* ಎಸ್‍ಎಟಿ/ಪಿಯು ನೋಂದಣಿ ಸಂಖ್ಯೆಯನ್ನು ನಮೂದಿಸಿ; ಅಥವಾ ಹೊರ ರಾಜ್ಯದ ಮಂಡಳಿಯ ವಿದ್ಯಾರ್ಥಿಗಳ/ಇತರರು ಪ್ರವೇಶ ಸಂಖ್ಯೆ ನಮೂದಿಸಿ. ವಿದ್ಯಾರ್ಥಿಗಳ ಪ್ರವೇಶ ಸಂದರ್ಭದಲ್ಲಿ ಸಂಸ್ಥೆಯಿಂದ ನೀಡಲಾಗುವ ವಿಶಿಷ್ಟ ಸಂಖ್ಯೆಯೇ ಪ್ರವೇಶ ಸಂಖ್ಯೆ

* ಜಾತಿ/ಶಾಲೆ/ಹಂತ ಇತ್ಯಾದಿ ವಿವರಗಳನ್ನು ದಾಖಲಿಸಿ

* ಒಟಿಪಿ (ಒಂದು ಸಲದ ಪಾಸ್ ವರ್ಡ್) ಪರಿಶೀಲನಾ ಪ್ರಕ್ರಿಯೆ ಮುಗಿಸಿ. ವಿದ್ಯಾರ್ಥಿ ಪಾಸ್ ಅರ್ಜಿಯಲ್ಲಿ ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳಿಸಲಾಗುತ್ತದೆ

* ಸಂಸ್ಥೆ/ಬಿಎಂಟಿಸಿ ಅನುಮತಿ ನೀಡುವವರೆಗೆ ಕಾಯಿರಿ. ಅನುಮತಿ ನೀಡಿಕೆ ಕುರಿತಂತೆ ನಿಮಗೆ ಎಸ್‍ಎಂಎಸ್ ಬರುತ್ತದೆ

* ಎಸ್‍ಎಂಎಸ್ ಬಂದ ನಂತರ, ಹತ್ತಿರದ ಪಾಸ್ ನೀಡಿಕೆ ಕೌಂಟರ್ ಗೆ ಸಮಯಾವಕಾಶ ಕೋರಿ ಆನ್ ಲೈನ್ ಮೂಲಕ ನೊಂದಾಯಿಸಿಕೊಳ್ಳಿ

* ಖುದ್ದಾಗಿ ಹೋಗಿ ಮತ್ತು ಆಯ್ದುಕೊಂಡ ಕೇಂದ್ರದಲ್ಲಿ ನಿಮ್ಮ ಭಾವಚಿತ್ರ ತೆಗೆಸಿಕೊಳ್ಳಿ

* ನೀಡಿಕೆ ಕೌಂಟರ್ ನಲ್ಲಿ ನಿಮ್ಮ ಕಾರ್ಡ್ ಪಡೆದುಕೊಳ್ಳಿ

ಸಂಬಂಧಿಸಿದ ಮಂಡಳಿಗಳನ್ನು ಆಧರಿಸಿ ವಿದ್ಯಾರ್ಥಿಗಳಿಗೆ ಸೂಚನೆಗಳು (ಎಸ್‍ಎಟಿಎಸ್/ಸಿಬಿಎಸ್‍ಇ/ಐಸಿಎಸ್ಇ)

* ರಾಜ್ಯದ ಮಂಡಳಿಗೆ ಸೇರಿದ ಶಾಲೆಗಳು/ಕಾಲೇಜುಗಳ ಶಾಲಾ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ (ಎಸ್‍ಎಟಿಎಸ್ ಮತ್ತು ಪಿಯು ಮಂಡಳಿ):

 • ಎಸ್‍ಎಟಿಎಸ್/ಪಿಯು ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ದಾಖಲಿಸುವುದು ಕಡ್ಡಾಯ

 • 1 ರಿಂದ 10ನೇ ತರಗತಿಯೊಳಗಿನ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಅಧಿಕಾರಿಗಳು ಮಂಜೂರಾತಿ ನೀಡುತ್ತಾರೆ; ಶಾಲೆಗಳಿಗೆ ಈ ಹೊರೆ ಇರುವುದಿಲ್ಲ. ಪಿಯು ವಿದ್ಯಾರ್ಥಿಗಳ ಅರ್ಜಿಗಳಿಗೆ ಆಯಾ ಕಾಲೇಜುಗಳು ಮಂಜೂರಾತಿ ನೀಡುತ್ತವೆ.

 • ಸೇರ್ಪಡೆ ಮಾಡಬೇಕಾದ ದಾಖಲೆಗಳು

  • 1 ರಿಂದ 10ನೇ ತರಗತಿಯೊಳಗಿನ ವಿದ್ಯಾರ್ಥಿಗಳು ನಿಗದಿತ ನಮೂನೆಯ ದೃಢೀಕೃತ ದಾಖಲೆಯನ್ನು ಸೇರ್ಪಡೆ ಮಾಡಬೇಕಾಗುತ್ತದೆ (ಇಲ್ಲಿ ಅನುಬಂಧ 3)

  • ಪಿಯು ವಿದ್ಯಾರ್ಥಿಗಳು ಜೆಪಿಇಜಿ ಮಾದರಿಯಲ್ಲಿರುವ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು (ಗರಿಷ್ಠ 1 ಎಂಬಿ) ಶುಲ್ಕ ಪಾವತಿಸಿದ ರಸೀದಿಯ ಪ್ರತಿಯೊಂದಿಗೆ ಸೇರ್ಪಡೆ ಮಾಡಬೇಕಾಗುತ್ತದೆ

 • ಸಮಾಜ ಕಲ್ಯಾಣ ಇಲಾಖೆಯಿಂದ ಮನ್ನಣೆ ಪಡೆದ ಪದವಿ/ವೃತ್ತಿಪರ/ತಾಂತ್ರಿಕ/ವೈದ್ಯಕೀಯ/ಸಂಜೆ/ಪಿಎಚ್.ಡಿ. ಕೋರ್ಸ್ ಗಳ/ವಿಶೇಷ ಶಾಲೆಗಳ ವಿದ್ಯಾರ್ಥಿಗಳಿಗೆ

  • ಶುಲ್ಕ ಪಾವತಿ ರಸೀದಿಯಲ್ಲಿರುವ ನಿಮ್ಮ ಪ್ರವೇಶ ಸಂಖ್ಯೆಯನ್ನು ಸೇರ್ಪಡೆ ಮಾಡಿ, ಸೂಚಿಸಿದಂತೆ ಮುಂದುವರಿಯಿರಿ

  • ಅರ್ಜಿಗಳಿಗೆ ಸಂಸ್ಥೆಗಳು ಅನುಮೋದನೆ ನೀಡುವವು

  • ಸೇರ್ಪಡೆ ಮಾಡಬೇಕಾದ ದಾಖಲೆಗಳು

   • ಜೆಪಿಜಿ ಮಾದರಿಯಲ್ಲಿರುವ ಪಾಸ್ ಪೋರ್ಟ್ ಭಾವಚಿತ್ರ (1 ಎಂಬಿ ವರೆಗೆ)

   • ಶುಲ್ಕ ಪಾವತಿಸಿದ ರಸೀದಿಯ ಪ್ರತಿ. ಇದರಲ್ಲಿ ಪ್ರವೇಶ ಸಂಖ್ಯೆ ಇರುವುದು ಕಡ್ಡಾಯ.

ಬಸ್ ಶುಲ್ಕ ಏರಿಕೆ

ವಿದ್ಯಾರ್ಥಿಗಳ ಬಸ್ ಪಾಸ್ ದರಗಳನ್ನು ಏರಿಕೆ ಮಾಡಿರುವುದಾಗಿ ಬಿಎಂಟಿಸಿ ಪತ್ರಿಕಾ ಹೇಳಿಕೆಯಲ್ಲಿ ಪ್ರಕಟಿಸಿದೆ.

ಹೊಸ ಪಾಸ್ ಗಳು ಮತ್ತು ಹಳೆಯ ಪಾಸ್ ಗಳ ನವೀಕರಣ ದರಗಳ ಏರಿಕೆ ವಿವರ

2019-20ರ ವಿದ್ಯಾರ್ಥಿ ಬಸ್ ದರಗಳ ವಿವರ

ಬಿಎಂಟಿಸಿ ವಿದ್ಯಾರ್ಥಿ ಪಾಸ್ ದರಗಳ ವಿವರಗಳು

ಕ್ರ.ಸಂ.

ವಿಭಾಗ

ಹೊಸ ಸ್ಮಾರ್ಟ್ ಕಾರ್ಡ್

ಕಳೆದ ವರ್ಷದ ಸ್ಮಾರ್ಟ್ ಕಾರ್ಡ್ ನವೀಕರಣ

ಪಾಸ್ ದರ

ಸಂಸ್ಕರಣಾ ಶುಲ್ಕ

ಒಟ್ಟು

ಪಾಸ್ ದರ

ಸಂಸ್ಕರಣಾ ಶುಲ್ಕ

ಒಟ್ಟು

1.

ಪ್ರಾಥಮಿಕ

ಉಚಿತ

200

200

ಉಚಿತ

170

170

2.

ಪ್ರೌಢಶಾಲೆ ವಿದ್ಯಾರ್ಥಿನಿಯರು

500

200

700

500

170

570

3.

ಪ್ರೌಢಶಾಲೆ ವಿದ್ಯಾರ್ಥಿಗಳು

700

200

900

700

170

870

4.

ಪಿಯುಸಿ

1050

200

1250

1050

170

1220

5.

ಪದವಿ

1260

200

1460

1260

170

1430

6.

ವೃತ್ತಿಪರ ಕಾಲೇಜು

1400

200

1600

1400

170

1570

7.

ತಾಂತ್ರಿಕ/ವೈದ್ಯಕೀಯ

1920

200

2120

1920

170

2090

8.

ಸಂಜೆ/ಪಿಎಚ್.ಡಿ.

1680

200

1880

1680

170

1850

9.

ಎಸ್‍ಸಿ/ಎಸ್‍ಟಿ ಎಲ್ಲಾ ಹಂತಗಳಿಗೆ

ಉಚಿತ

200

200

ಉಚಿತ

170

170

ಮೂಲ: ಬಿಎಂಟಿಸಿ

ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಅವರ ವಾರ್ಷಿಕ ಶಾಲಾ ಬಸ್ ಶುಲ್ಕ ರೂ.200 ಮಾತ್ರ, ಏರಿಕೆ ಎಲ್ಲರಿಗೂ ಅನ್ವಯವಾಗಿದೆ. ಹೊಸ ವಾರ್ಷಿಕ ಪಾಸ್ ನೀಡಿಕೆ ದರವನ್ನು ಶಾಲೆ, ಪದವಿ ಮತ್ತು ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳಿಗೆ ರೂ.100 ರಿಂದ ರೂ250ವರೆಗೆ ಹೆಚ್ಚಿಸಲಾಗಿದೆ. ವೃತ್ತಿಪರ ಕಾಲೇಜು ವಿದ್ಯಾರ್ಥಿಗಳಿಗೆ ಗರಿಷ್ಠ ರೂ.250 ಏರಿಕೆಯಾಗಿದ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ರೂ.240 ಹಾಗೂ ಸಂಜೆ/ಪಿಎಚ್.ಡಿ. ವಿದ್ಯಾರ್ಥಿಗಳು ರೂ.200 ಹೆಚ್ಚಿಗೆ ಪಾವತಿಸಬೇಕಿದೆ.

ಹಳೆಯ ಪಾಸ್ ಗಳ ನವೀಕರಣ ದರವನ್ನು ರೂ.100ರಿಂದ ರೂ.220ಕ್ಕೆ ಹೆಚ್ಚಿಸಲಾಗಿದೆ.

ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುವುದು ಎಂದು ಹಿಂದಿನ ಸಿದ್ದರಾಮಯ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ್ದನ್ನು ಅನುಷ್ಠಾನಗೊಳಿಸಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ಶುಲ್ಕ ಏರಿಕೆ ಜಾರಿಯಾಗಿದೆ. ಸದ್ಯ, ಟಿಕೆಟ್ ದರದ ಶೇ.25ನ್ನು ವಿದ್ಯಾರ್ಥಿಗಳು ಬಸ್ ಪಾಸ್ ಗಾಗಿ ನೀಡಬೇಕಿದೆ. ವಿದ್ಯಾರ್ಥಿ ಪಾಸ್ ಗಳ ಶುಲ್ಕವು ಸರ್ಕಾರಿ ಕಾಲೇಜುಗಳ ಬೋಧನಾ ಶುಲ್ಕಕ್ಕಿಂತ ಹೆಚ್ಚಿಗಿದೆ ಎನ್ನುತ್ತಾರೆ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಒಕ್ಕೂಟದ (ಎಐಡಿಎಸ್‍ಒ) ಜಿಲ್ಲಾ ಅಧ್ಯಕ್ಷೆ ಸಿತಾರಾ.

ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ರದ್ದುಪಡಿಸಿರುವುದನ್ನು ಪ್ರಶ್ನಿಸಿರುವ ಅವರು, ಇಂಟರ್ ನೆಟ್ ಸೌಲಭ್ಯ ಮತ್ತು ಸಂಪರ್ಕ ಇಲ್ಲವೇ ಇಲ್ಲ ಎಂದು ಆರೋಪಿಸಿದ್ದಾರೆ.

ಆನ್ ಲೈನ್ ಸೇವಾ ವ್ಯವಸ್ಥೆಯನ್ನು ಪುನರಾರಂಭಿಸುವುದಕ್ಕೂ ಮುನ್ನವೇ ಶಾಲೆಗಳು ಮತ್ತು ಪಿಯುಸಿ ಕಾಲೇಜುಗಳು ಪುನರಾರಂಭವಾಗಿದ್ದರೂ, ಹಳೆಯ ಪಾಸ್ ಗಳ ಮೂಲಕ ವಿದ್ಯಾರ್ಥಿಗಳು ರಿಯಾಯಿತಿ ಪಡೆಯಲಾಗದು ಎಂದು ಬಿಎಂಟಿಸಿ ಇದಕ್ಕೂ ಮುನ್ನ ಹೇಳಿತ್ತು. ಆದರೆ, ವಿದ್ಯಾರ್ಥಿಗಳ ಪ್ರತಿಭಟನೆಗಳ ನಂತರ, ಜೂನ್ 20ರವರೆಗೆ ಹಳೆಯ ಪಾಸ್ ಗಳ ಬಳಕೆಗೆ ನಿಗಮ ಅವಕಾಶ ಕಲ್ಪಿಸಿತ್ತು.

ಅಪ್ ಡೇಟ್: ಪ್ರತಿಭಟನೆ ನಂತರ ಬಸ್ ಪಾಸ್ ಶುಲ್ಕ ಏರಿಕೆಯನ್ನು ಬಿಎಂಟಿಸಿ ಹಿಂಪಡೆದಿದೆ. ಈಗ ಶುಲ್ಕಗಳು ಹಿಂದಿನ ವರ್ಷದಲ್ಲಿದ್ದಂತೆ ಇರಲಿವೆ. ರಾಜ್ಯ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಬಿಎಂಟಿಸಿ ಈ ನಿರ್ಧಾರ ಕೈಗೊಂಡಿದೆ.

Read the original in English here

Support Citizen Matters - independent, Reader-funded media that covers your city like no other.DONATE