ಎರಡು ಡಬ್ಬಾ, ಒಂದು ಚೀಲದ ಮಂತ್ರ – ಕಸವನ್ನು ಒಡೆದು ಆಳುವ ತಂತ್ರ

ಶೇವ್ ಮಾಡಿ ಬಿಸಾಕಿದ ಬ್ಲೇಡ್, ತಿಂದುಳಿದ ಊಟ, ಒಡೆದ ಗಾಜಿನ ಬಾಟಲಿ, ಸಿರಿಂಜು, ತರಕಾರಿ ಸಿಪ್ಪೆ, ಸ್ಯಾನಿಟರಿ ಪ್ಯಾಡು, ಪ್ಲಾಸ್ಟಿಕ್, ಒದ್ದೆಯಾದ ಕಾಗದ, ಕಾಂಡಮ್, ಉಪಯೋಗಿಸಿದ ಡಯಾಪರ್ - ಎಲ್ಲವನ್ನೂ ಒಟ್ಟೂ ಸೇರಿಸಿ ಬಿಸಾಕಿದರೆ ಸಿಗುವುದೇನು? ಅದೊಂದುವಿಷದ ಕಾಕ್ಟೇಲ್. ಇದನ್ನು ಹೇಗೆ ನಿಭಾಯಿಸಬೇಕು?

ರಸ್ತೆಮೂಲೆಯಲ್ಲಿ ಯಾರೋ ಎಸೆದುಹೋದ ಪ್ಲಾಸ್ಟಿಕ್ ಕವರಿನಲ್ಲಿ ನೀಟಾಗಿ ಸುತ್ತಿಟ್ಟ ಕಸ ಕಂಡರೆ ಎಲ್ಲರಿಗೂ ಮೈಯುರಿ. ಸ್ವಚ್ಛಭಾರತದ ಕನಸಿಗೆ ಹೀಗೆಲ್ಲಾ ಕಲ್ಲು ಹಾಕುತ್ತಾರಲ್ಲ ಅಂತ ಕೋಪ.ಅದರ ಫೋಟೋ ತೆಗೆದು ಕಸ ಹಾಕಿದವರಿಗೆ ನಾಕು ಉಗಿದು ಫೇಸ್ ಬುಕ್ಕಿನಲ್ಲಿ ಅಪ್ಲೋಡ್ ಮಾಡಿ ರೋಷ ತೀರಿಸಿಕೊಂಡರೆ ಮುಗಿಯಿತು. ನಾಳೆ ಇನ್ನೊಂದು ದಿನ, ತಲೆಕೆಡಿಸಿಕೊಳ್ಳಲು ಬೇರೇನಾದರೂ ಇದ್ದೇ ಇರುತ್ತದೆ.ತಮ್ಮ ಸುತ್ತಲೂ ತುಂಬಿದ ಕಸವನ್ನು ನೋಡಿ ನೋಡಿ ಬೇಸರವಾಗಿ ಇದನ್ನು ತಡೆಯಲು ಏನಾದರೂ ಮಾಡಬೇಕೆನ್ನುವವರಿಗಾಗಿ ಈ ಲೇಖನ.

ಅಸಲು ಈ ಕಸದಲ್ಲಿ ಇರುವುದಾದರೂ ಏನು?

ಕಸದ ವಿಧಗಳು ಹಲವಾರು. ಆದರೆ ದಿನನಿತ್ಯ ನಾವು ಸೃಷ್ಟಿಸುವುದು ಮುಖ್ಯವಾಗಿ ಮೂರು ವಿಧ – ಹಸಿ ಕಸ, ಒಣ ಕಸ, ಅಪಾಯಕಾರಿ ಕಸ.

ಹಸಿ ಕಸ – ಇದು ಮುಖ್ಯವಾಗಿ ಸಸ್ಯಜನ್ಯ ಅಥವಾ ಪ್ರಾಣಿಜನ್ಯ. ಹಸಿ ಕಸದ ಪಂಗಡಕ್ಕೆ ಸೇರಿದ ಪದಾರ್ಥಗಳ ಮಣ್ಣಿನಲ್ಲಿ ಮಣ್ಣಾಗಿ ಹೋಗುವ ಸಾವಯವ ಪದಾರ್ಥಗಳನ್ನು ಹೊಂದಿರುತ್ತದೆ. ಅಂದರೆ, ನೀವು ಅದನ್ನು ಒಂದು ಜಾಗದಲ್ಲಿ ಇಟ್ಟು ಒಂದು ತಿಂಗಳು ಬಿಟ್ಟು ನೋಡಿದರೆ ಅದು ತಂತಾನಾಗಿಯೇ ಸೂಕ್ಷ್ಮಜೀವಿಗಳ ಸಹಾಯದಿಂದ ತನ್ನನ್ನು ತಾನು ಒಡೆದುಕೊಂಡು ಗೊಬ್ಬರವಾಗಿರುತ್ತದೆ ಅಥವಾ ಕರಗಿಹೋಗಿರುತ್ತದೆ. ತಿನ್ನುವ ಆಹಾರವಸ್ತುಗಳು, ತರಕಾರಿ ಕಸ, ಹೂವು, ಹಣ್ಣಿನ ಸಿಪ್ಪೆ ಇತ್ಯಾದಿಗಳು ಈ ಸಾಲಿಗೆ ಸೇರುವಂತಹವು. ಒದ್ದೆಯಾದ ಕಾಗದ ಕೂಡ ಇದೇ ಸಾಲಿಗೆ ಸೇರುತ್ತದೆ, ಯಾಕೆಂದರೆ ಇದು ಸಸ್ಯಜನ್ಯ.ಶುದ್ಧ ಹಸಿಕಸದಿಂದ ಗೊಬ್ಬರ ತಯಾರಿಸಬಹುದು, ಅಥವಾ ಬಯೋಗ್ಯಾಸ್ ತಯಾರಿಸಬಹುದು.

ಒಣ ಕಸ- ಪೇಪರ್, ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಬಾಟಲುಗಳು, ಸೀಡಿಗಳು, ರಬ್ಬರ್, ಬಟ್ಟೆ, ಹಾಲಿನ ಪ್ಯಾಕೆಟುಗಳು ಇನ್ನಿತರ ಯಾವದೇ ರೀತಿಯ ಮರುಬಳಕೆ ಮಾಡಬಹುದಾದ, ಅಥವಾ ಕರಗಿಸಿ ಬೇರಿನ್ನೇನನ್ನೋ ತಯಾರಿಸಬಹುದಾದ ವಸ್ತುಗಳು – ಇಂಗ್ಲಿಷಿನಲ್ಲಿ ರಿಸೈಕ್ಲೇಬಲ್ಸ್. ಇವನ್ನು ಎಷ್ಟು ಕಾಲ ಇಟ್ಟರೂ ಏನೂ ಆಗದು, ಕೊಳೆತುಹೋಗದು. ಒಂದು ವೇಳೆ ಮಣ್ಣಿನಲ್ಲಿ ಸೇರಿದರೆ ಇವುಗಳಲ್ಲಿರುವ ಘಟಕಾಂಶಗಳು ಮಣ್ಣಿಗೆ ಸೇರಿ ಮಣ್ಣನ್ನು ಕಲುಷಿತವಾಗಿಸಬಲ್ಲವೇ ಹೊರತು ಬೇರೇನೂ ಉಪಯೋಗವಿಲ್ಲ.

ಅಪಾಯಕಾರಿ ಪದಾರ್ಥಗಳು– ಬ್ಲೇಡ್, ಒಡೆದ ಗಾಜಿನ ಬಾಟಲಿ, ಸಿರಿಂಜು, ಸ್ಯಾನಿಟರಿ ಪ್ಯಾಡು, ಕಾಂಡಮ್, ಡಯಾಪರ್, ಟ್ಯಾಂಪನ್ ಇತ್ಯಾದಿ. ಇವು ಮಣ್ಣಿನಲ್ಲಿ ಸೇರಿದಲ್ಲಿ ಮಣ್ಣನ್ನು ಕಲುಷಿತವಾಗಿಸುತ್ತವೆ, ಹಾಗೂ ಅಪಾಯಕಾರಿ ರಾಸಾಯನಿಕಗಳನ್ನು ಮಣ್ಣಿಗೆ ಬಿಡುತ್ತವೆ. ಬ್ಲೇಡ್, ಗಾಜಿನ ಬಾಟಲಿ ಇತ್ಯಾದಿಗಳು ಕೈಗೆ-ಕಾಲಿಗೆ ತಾಗಿದಲ್ಲಿ ಗಾಯವುಂಟಾಗಿ ಆರೋಗ್ಯಸಂಬಂಧಿ ತೊಂದರೆಗಳುಂಟಾಗಬಹುದು.

ಈ ಮೂರು ವಿಧದ ಕಸಗಳು ಬೇರೆಬೇರೆಯಾಗಿದ್ದಾಗ ಅವುಗಳನ್ನು ವಿಲೇವಾರಿ ಮಾಡುವುದು ಸುಲಭ. ಆದರೆ ಇವುಗಳು ಒಂದಕ್ಕೊಂದು ಸೇರಿ ಮಿಶ್ರವಾದಾಗ ವಿಲೇವಾರಿ ಬಲುಕಷ್ಟ.

ಮಿಶ್ರಕಸ – ಮಾನವಮಾತ್ರರು ಮುಟ್ಟಲಾಗದ ವಿಷ

ಬೆಳಗ್ಗೆ ಕಸದ ಆಟೋ ಮನೆಮುಂದೆ ಬಂದು ಕಸ ಕೊಡಿ ಅಂತ ಕೂಗಿದಾಗ ನಮ್ಮಲ್ಲಿ ಹೆಚ್ಚಿನವರು ಅದೇ ರೀತಿ ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿದ ಕಸ ತಂದು ಆತನಿಗೆ ಕೊಡುತ್ತೇವೆ. ರಸ್ತೆ ಕೊನೆಯಲ್ಲಿ ಬಿಸಾಕಿದವನಿಗೂ ನಮಗೂ ಏನು ವ್ಯತ್ಯಾಸ?

ಇದರಿಂದ ಏನಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳುವುದಾದರೆ:

  • ನಮಗೆ ಕಸವೆಂದರೆ ಹೇಗೆ ಅಸಹ್ಯವೋ, ಹಾಗೇ ನಮ್ಮ ಕಸವನ್ನು ತೆಗೆದುಕೊಂಡು ಹೋಗಿ ಹಾಕುತ್ತಾರಲ್ಲ, ಆ ಹಳ್ಳಿಗಳ ಜನರಿಗೂ ಕಸ ಕಂಡರೆ ಅಸಹ್ಯ. ಬರಿಯ ಕಸವೆನ್ನುವ ಕಾರಣಕ್ಕಲ್ಲ – ಅದು ಅವರಿಗೆ ಮಾಡುವ ತೊಂದರೆಗಾಗಿ.
  • ವೈಜ್ಞಾನಿಕ ವಿಧಾನದಲ್ಲಿ ವಿಂಗಡಣೆಯಾಗದ ಕಸದಲ್ಲಿ ಸ್ವಾಭಾವಿಕ ಸಾವಯವ ವಸ್ತುಗಳ ಜತೆಗೆ ಪ್ಲಾಸ್ಟಿಕ್, ರಬ್ಬರ್, ಗಾಜು, ಬ್ಯಾಟರಿಗಳು ಇತ್ಯಾದಿಗಳಿರುತ್ತವೆ. ಇದನ್ನು ಯಾವುದೇ ರೀತಿಯಲ್ಲಿ ವಿಲೇವಾರಿ ಮಾಡುವುದು ಕಷ್ಟಕರ.
  • ಯಾವುದೇ ಒಂದು ಖಾಲಿ ಜಾಗದಲ್ಲಿ ಹಾಕಿದ ಕಸ ಕೊಳೆಯದೆ ಗೊಬ್ಬರವಾಗಬೇಕಾದರೆ ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಗಾಳಿ ಸಿಗಬೇಕು, ಹಾಗೂ ಸೂಕ್ಷ್ಮಜೀವಿಗಳು ಅದರಲ್ಲಿ ಉತ್ಪತ್ತಿಯಾಗಬೇಕು. ಪ್ಲಾಸ್ಟಿಕಿನಲ್ಲಿ ನಾವು ಸುತ್ತಿಕೊಡುವ ಕಸವನ್ನು ಯಾರೂ ಬಿಚ್ಚುವುದಿಲ್ಲ. ಹಾಗಾಗಿ ಅದಕ್ಕೆ ಬೇಕಾದ ಗಾಳಿ ಸಿಗದೆ ಅದು ಕೊಳೆಯಲಾರಂಭಿಸುತ್ತದೆ.
  • ನಗರಗಳಿಂದ ಸಂಗ್ರಹಿಸಲಾಗುವ ಮಿಶ್ರಕಸವನ್ನು ನಗರದಿಂದಾಚೆಗೆ ಅದಕ್ಕೆಂದೇ ನಿಗದಿಪಡಿಸಲಾದ ಎಕರೆಗಟ್ಟಲೆ ಜಾಗದಲ್ಲಿ ಗುಂಡಿ ತೋಡಿ ಹಾಕುತ್ತಾರೆ. ಹೀಗೆ ಮಿಶ್ರಕಸವನ್ನು ಹಾಕುವ ಗುಂಡಿಯ ತಳದಲ್ಲಿ ಸಿಮೆಂಟ್ ಹಾಕಬೇಕು, ಕಸದಿಂದಿಳಿಯುವ ನೀರು ಅಂತರ್ಜಲವನ್ನು ಸೇರದಂತೆ ಕಾಪಾಡಲಿಕ್ಕೋಸ್ಕರ ಅದನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು ಹಾಗೂ ಅದನ್ನು ಸಂಸ್ಕರಿಸಿ ಹಾನಿಕಾರಕ ಅಂಶಗಳನ್ನು ಪ್ರತ್ಯೇಕಿಸಿ ನೆಲಕ್ಕೆ ಬಿಡಬೇಕು ಇತ್ಯಾದಿ ನಿಯಮಗಳಿವೆ. ಆದರೆ ಇವನ್ನು ಶಿಸ್ತಾಗಿ ಪಾಲನೆ ಮಾಡುವ ಸಂಸ್ಥೆಗಳು ವಿರಳ. ಇದರಿಂದಾಗಿ ವಿವಿಧ ಸಮಸ್ಯೆಗಳು ತಲೆದೋರುತ್ತವೆ.
  • ಮಿಶ್ರಕಸ ಕೊಳೆಯುವಾಗ ಅದರಿಂದ ಹೊರಡುವ ಕೊಳೆನೀರಿನಲ್ಲಿ ಎಲ್ಲಾ ರೀತಿಯ ಲೋಹಗಳು, ರಾಸಾಯನಿಕಗಳು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನೈಟ್ರೇಟ್ (ಸಾರಜನಕ) ಬಿಡುಗಡೆಯಾಗುತ್ತವೆ. ಯಾಕೆಂದರೆ ಈಗಾಗಲೇ ಹೇಳಿದಂತೆ ಅದು ಮಿಶ್ರವಾಗಿರುತ್ತದೆ, ಅದಲ್ಲಿ ಪ್ಲಾಸ್ಟಿಕ್, ರಬ್ಬರ್, ಬ್ಯಾಟರಿಗಳು ಮತ್ತಿತರ ಸಾಮಗ್ರಿಗಳಿರುತ್ತವೆ.
  • ಈ ವಿಷಪೂರಿತ ನೀರು ಮಣ್ಣಿನ ಮೂಲಕ ಕೆಳಗಿಳಿದು ಅಂತರ್ಜಲವನ್ನು ಸೇರುತ್ತದೆ,ಮಣ್ಣು ಮತ್ತು ನೀರನ್ನು ಕಲುಷಿತವಾಗಿಸುತ್ತದೆ.
  • ಅಷ್ಟಲ್ಲದೇ ಕೊಳೆಯುತ್ತಿರುವ ಸಾವಯವ ಪದಾರ್ಥವು ವಿವಿಧ ರೀತಿಯ ಕ್ರಿಮಿಕೀಟಗಳು ಹಾಗೂ ಸೊಳ್ಳೆಗಳನ್ನು ಹುಟ್ಟುಹಾಕಿ ಮಾರಕ ರೋಗಗಳಿಗೆ ಕಾರಣವಾಗುತ್ತದೆ.
  • ಮಿಶ್ರಕಸವನ್ನು ಬೇರೆ ರೀತಿಯಲ್ಲಿ ವಿಲೇವಾರಿ ಮಾಡಲು ಕಷ್ಟವಾಗುವ ಕಾರಣ ಅದನ್ನು ಕಂಟ್ರಾಕ್ಟರುಗಳ ಸುಡುತ್ತಾರೆ. ಹೀಗೆ ದೊಡ್ಡ ಪ್ರಮಾಣದಲ್ಲಿ ಮಿಶ್ರಕಸವನ್ನು ಸುಟ್ಟಾಗ ಪ್ಲಾಸ್ಟಿಕ್, ರಬ್ಬರ್, ಸಾವಯವ ಕಸ ಇತ್ಯಾದಿಗಳೆಲ್ಲವೂ ಒಟ್ಟಿಗೆ ಸುಟ್ಟು ಅದರಿಂದ ವಿಷಯುಕ್ತವಾದ ಗಾಳಿ ಹೊರಬರುತ್ತದೆ. ಇದು ಕಿಲೋಮೀಟರ್ ಗಟ್ಟಲೆ ವಿಸ್ತೀರ್ಣದಲ್ಲಿ ಹಬ್ಬಿಸುತ್ತಮುತ್ತಲ ಹಳ್ಳಿಗಳಲ್ಲಿರುವ ಮನುಷ್ಯರಿಗೆ ಹಾಗೂ ಜಾನುವಾರುಗಳಿಗೆ ಉಸಿರಾಟದ ತೊಂದರೆಯಿಂದ ಹಿಡಿದು ಎಲ್ಲಾ ರೀತಿಯ ರೋಗಗಳನ್ನೂ ತಂದೊಡ್ಡುತ್ತದೆ.
  • ಬೆಂಗಳೂರಿನ ಪಕ್ಕದಲ್ಲಿರುವ ಮಂಡೂರು ಮತ್ತು ಮಾವಳ್ಳಿಪುರಗಳೆಂಬ ಹಳ್ಳಿಗಳಿಗೆ ಭೇಟಿ ನೀಡಿದರೆ ಮಿಶ್ರಕಸವನ್ನು ಹಳ್ಳಿಗಳಿಗೆ ಕಳುಹಿಸುವುದರಿಂದಾಗುವ ತೊಂದರೆ ಎಷ್ಟು ಭೀಕರವಾಗಬಲ್ಲುದು. ಯಾವ ಮಟ್ಟದಲ್ಲಿ ತೊಂದರೆ ಕೊಡಬಲ್ಲುದು ಎಂಬುದು ನಿಮಗರಿವಾಗುತ್ತದೆ.
  • ಈ ಎಲ್ಲಾ ಕಾರಣಗಳಿಗಾಗಿ ಹಳ್ಳಿಗರು ನಮ್ಮೂರಿಗೆ ನಿಮ್ಮ ಕಸ ಬೇಡ, ನೀವೇ ಇಟ್ಟುಕೊಳ್ಳಿ ಎಂದು ಪ್ರತಿಭಟಿಸುತ್ತಾರೆ, ಪರಿಣಾಮವಾಗಿ ಬೆಂಗಳೂರಿನ ಬೀದಿಬೀದಿಗಳಲ್ಲಿ ಕಸ ಕೊಳೆಯಲಾರಂಭಿಸುತ್ತದೆ.

ಇಷ್ಟಾದಾಗ ನಾವು ವ್ಯವಸ್ಥೆಯ ವಿರುದ್ಧ, ಸರಕಾರದ ವಿರುದ್ಧ ಪ್ರತಿಭಭಟಿಸುತ್ತೇವೆ, ಫೇಸ್ ಬುಕ್ಕಿನಲ್ಲಿ ನಮ್ಮ ಕೋಪವನ್ನು ಅಸಮಾಧಾನವನ್ನು ಕಾರಿಕೊಳ್ಳುತ್ತೇವೆ. ಒಂದು ವೇಳೆ ನಾವೆಲ್ಲರೂ ಸೇರಿ ಕಸವನ್ನು ಹೇಗಾಗಬೇಕೋ ಅದೇ ರೀತಿಯಲ್ಲಿ ವಿಂಗಡಣೆ ಮಾಡಿದ್ದಲ್ಲಿ ವಿಂಗಡಿಸಿದ ಹಸಿ ಕಸವು ಗೊಬ್ಬರಕ್ಕೆ ಅಥವಾ ಬಯೋಗ್ಯಾಸ್ ಕಾರ್ಖಾನೆಗಳಿಗೆ ಹೋಗಿರುತ್ತಿತ್ತು. ಒಣ ಕಸವನ್ನು ಮತ್ತೆ ವಿಂಗಡಿಸಿ ಅದನ್ನು ಪುನರುತ್ಪಾದನಾಘಟಕಗಳಿಗೆ ಕಳುಹಿಸಲಾಗಿರುತ್ತಿತ್ತು, ಅಥವಾ ಇತರ ಉಪಯೋಗಗಳಿಗೆ ಹಚ್ಚಲಾಗುತ್ತಿತ್ತು.

ಬೆಂಗಳೂರಿನಹೊರವಲಯದ ಮಂಡೂರು ಎಂಬ ಹಳ್ಳಿಯಲ್ಲಿ ಕಸ ರಾಶಿ ಬಿದ್ದಿರುವುದು ಹೀಗೆ. ಚಿತ್ರ:ಶ್ರೀ

ಇಲ್ಲಿ ತಪ್ಪು ಯಾರದು? ಬದಲಾವಣೆ ಎಲ್ಲಿಂದ ಶುರುವಾಗಬೇಕು?

ಬದಲಾವಣೆ ನಮ್ಮಿಂದಲೇ ಶುರುವಾಗಲಿ

ಹೌದು, ಗಾಂಧೀಜಿ ಹೇಳಿದ್ದರು, ನೀ ನೋಡಬಯಸುವ ಬದಲಾವಣೆ ನಿನ್ನಿಂದಲೇ ಶುರುವಾಗಲಿ ಎಂದು. ಕಸದ ವಿಚಾರದಲ್ಲಂತೂ ಇದು ಸತ್ಯವೋ ಸತ್ಯ. ಎಲ್ಲಕ್ಕಿಂತ ಮೊದಲು, ಯಾರೋ ಅಲ್ಲಿ ಕಸ ಬಿಸಾಕುತ್ತಿದ್ದಾರೆ, ಸರಕಾರ ಕಸ ಎತ್ತುತ್ತಿಲ್ಲ ಅಂತೆಲ್ಲ ದೂರು ಹೇಳುವುದನ್ನು ನಾವು ಬಿಡಬೇಕು. ನನ್ನ ಕೈಲಾಗಿದ್ದು ಮಾಡಿ ಆದ ಮೇಲೆ ಊರಿನ ಡೊಂಕು ಸರಿಮಾಡುತ್ತೇನೆಂದು ಹೊರಡಬೇಕು, ಆಗಲೇ ಎಲ್ಲವೂ ಸರಿಹೋಗುವುದು.

ಕಳೆದ ಮೂರು ವರ್ಷಗಳಿಂದ ಕಸದ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಾ ನೂರಾರು ಮಾದರಿಗಳನ್ನು ಅಧ್ಯಯನ ನಡೆಸಿ ನೂರಾರು ವಿಚಾರಗಳನ್ನು ತಿಳಿದುಕೊಂಡಿರುವ ಕರ್ನಾಟಕ ಉಚ್ಚ ನ್ಯಾಯಾಲಯ ಇತ್ತೀಚೆಗೆ ಮಹತ್ತರದ ತೀರ್ಪೊಂದನ್ನು ಕೊಟ್ಟಿದೆ, ಹಾಗೂ ಕಸವನ್ನು ಒಡೆದು ಆಳುವ ವಿಧಾನಕ್ಕೆ ಮುನ್ನುಡಿ ಬರೆದಿದೆ. ಕಸವನ್ನು ಮೂರು ರೀತಿಯಲ್ಲಿ ವಿಂಗಡಣೆ ಮಾಡಬೇಕು, ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಹಾಯವಾಗುವಂತೆ ನೋಡಿಕೊಳ್ಳಬೇಕು ಎಂದು ಆದೇಶ ಕೊಟ್ಟಿದೆ. ಎರಡು ಡಬ್ಬಾ, ಒಂದು ಚೀಲ ಉಪಯೋಗಿಸಿಕೊಂಡು ಕಸ ವಿಂಗಡಣೆ ಮಾಡಿದರೆ ಸೂಕ್ತ ಎಂದು ಸಲಹೆ ಕೊಟ್ಟಿದೆ.

ಏನಿದು ಎರಡು ಡಬ್ಬಾ-ಒಂದು ಚೀಲ ನೀತಿ?

ಈ ಹಿಂದೆ ತಿಳಿಸಿದ ಪ್ರಕಾರ ಎರಡು ರೀತಿಯ ಕಸಗಳು ಒಂದಕ್ಕೊಂದು ಸೇರಿ ಮಿಶ್ರವಾದಾಗ ಅದಕ್ಕೆ ಬೆಂಕಿ ಹಚ್ಚಿ ಸುಡುವುದರ ಹೊರತು ಬೇರೇನೂ ಉಪಾಯವಿಲ್ಲ. ಬೆಂಕಿ ಹಚ್ಚಿದಾಗ ಅದರ ಪರಿಣಾಮವಾಗಿ ನಮ್ಮ ಸುತ್ತಲ ನೆಲ-ಜಲ-ಗಾಳಿಗಳು ಕಲುಷಿತವಾಗುತ್ತವೆ. ಹಾಗಾಗಿಯೇ ಉಚ್ಚ ನ್ಯಾಯಾಲಯ ನೀಡಿರುವ ಸಲಹೆಯ ಪ್ರಕಾರ, ಕಸವನ್ನು ಒಡೆದು ಆಳಿರಿ. ಕಸವು ಉತ್ಪಾದನೆಯಾಗುವ ಮೂಲದಲ್ಲಿಯೇ ಕಸವನ್ನು ವಿಂಗಡಿಸಿ. ಅದನ್ನು ನಾವು ಸರಿಯಾಗಿ ಮಾಡಿದಲ್ಲಿ ಮುಖ್ಯವಾದ ತೊಂದರೆ ಸರಿಹೋದಂತೆಯೇ ಅರ್ಥ.

ಮನೆಗಳಲ್ಲಿ ನೀವು ಮಾಡಬೇಕಾದ್ದು  ಇಷ್ಟೆ. ಮನೆಯಲ್ಲಿ ಎರಡು ಕಸದ ಡಬ್ಬಾ(ಒಂದು ಹಸಿರು, ಇನ್ನೊಂದು ಕೆಂಪು), ಒಂದು ಪುನ: ಉಪಯೋಗಿಸಬಹುದಾದಂತಹ ಬಟ್ಟೆಯ ಅಥವಾ ಪ್ಲಾಸ್ಟಿಕ್ ಚೀಲ ತಂದಿಟ್ಟುಕೊಳ್ಳಿ.

  • ಹಸಿಕಸದ ಡಬ್ಬ (ಹಸಿರು ಡಬ್ಬ) ಅಡಿಗೆಮನೆಯಲ್ಲಿರಲಿ. ಅದರೊಳಗೆ ನಿಮಗೆ ಅದನ್ನು ಶುಚಿಗೊಳಿಸುವುದು ಸುಲಭವಾಗಬೇಕೆಂದರೆ ಒಂದು ನ್ಯೂಸ್ ಪೇಪರ್ ಹಾಕಿ, ಆದರೆ ಪ್ಲಾಸ್ಟಿಕ್ ಮಾತ್ರ ಬೇಡವೇ ಬೇಡ.
  • ಒಣಕಸದ ಚೀಲ (ಅಥವಾ ಡಬ್ಬ) ವರಾಂಡದಲ್ಲಿರಲಿ. ಇದಕ್ಕೆ ನ್ಯೂಸ್ ಪೇಪರ್ ಲೈನಿಂಗ್ ಅಗತ್ಯವಿಲ್ಲ.
  • ಅಪಾಯಕಾರಿ ಪದಾರ್ಥಗಳ ಡಬ್ಬ (ಕೆಂಪು ಡಬ್ಬ) ಬಚ್ಚಲಮನೆಯಲ್ಲಿರಲಿ. ಇದಕ್ಕೆ ಬೇಕಾದಲ್ಲಿ ಪ್ಲಾಸ್ಟಿಕ್ ಕವರ್ ಹಾಕಬಹುದು.
  • ಶಿಸ್ತಾಗಿ ಆಯಾಯಾ ಕಸವನ್ನು ಅಲ್ಲಲ್ಲೇ ಹಾಕಿ. ತಿಂದುಳಿದ ಆಹಾರಪದಾರ್ಥಗಳು, ತರಕಾರಿ ಸಿಪ್ಪೆ, ಹಾಳಾದ ದವಸಧಾನ್ಯಗಳು ಅಥವಾ ಆಹಾರಪದಾರ್ಥಗಳನ್ನು ಹಸಿರು ಡಬ್ಬದಲ್ಲಿ (ಹಸಿಕಸದ ಡಬ್ಬದಲ್ಲಿ) ಹಾಕಿ. ಅಪಾಯಕಾರಿ ವಸ್ತುಗಳನ್ನು ಮತ್ತು ಡಯಾಪರ್, ಕಾಂಡಮ್, ಸ್ಯಾನಿಟರಿ ಪ್ಯಾಡುಗಳನ್ನು ಕೆಂಪು ಡಬ್ಬದಲ್ಲಿ ಹಾಕಿ. ಪೇಪರ್ ಮತ್ತು ಪ್ಲಾಸ್ಟಿಕುಗಳನ್ನು ಚೀಲದಲ್ಲಿ (ಅಥವಾ ಒಣಕಸ ಡಬ್ಬದಲ್ಲಿ) ಹಾಕಿ.
  • ಬಹಳ ಮುಖ್ಯವಾಗಿ, ಮಕ್ಕಳಿಂದ ಹಿಡಿದು ದೊಡ್ಡವರ ತನಕ ಮನೆಮಂದಿಗೆಲ್ಲ ಇದನ್ನು ಅಭ್ಯಾಸ ಮಾಡಿಸಿ. ಯಾಕೆಂದರೆ ಇದು ಒಬ್ಬರ ಕೈಲಾಗುವ ಕೆಲಸವಲ್ಲ.

ಇಷ್ಟಾದ ಮೇಲೆ, ಈ ಕಸವನ್ನು ಏನು ಮಾಡಬೇಕೆಂಬುದು ಪ್ರಶ್ನೆ.

ಕಸದ ವಿಲೇವಾರಿ ಹೇಗೆ?

ಒಟ್ಟಾಗಿರುವ ಕಸವನ್ನು ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ. ಆದರೆ ವಿಭಜಿಸಲ್ಪಟ್ಟ ಕಸವನ್ನು ವಿಲೇವಾರಿ ಮಾಡಲು ನೂರೆಂಟು ದಾರಿಗಳಿವೆ.

  • ಹಸಿ ಕಸವನ್ನು ಮನೆಯ ಆವರಣದಲ್ಲೇ ಸರಳ ವಿಧಾನಗಳ ಮೂಲಕ ಕಾಂಪೋಸ್ಟ್ ಮಾಡಬಹುದು ಅಥವಾ ಅದರಿಂದ ಬಯೋಗ್ಯಾಸ್ ತಯಾರಿಸಬಹುದು. ಮನೆಯ ಹಿಂದೆ ಖಾಲಿ ಜಾಗವಿದ್ದಲ್ಲಿ ಮಣ್ಣೊಳಗೆ ಹುಗಿದು ಬಿಟ್ಟರೆ ಅದು ತಂತಾನೇ ಗೊಬ್ಬರವಾಗಿ ಬದಲಾಗುತ್ತದೆ. ಅದಲ್ಲವಾದರೆ ಅಂತರ್ಜಾಲದಲ್ಲಿ ಮನೆಯೊಳಗೆಯೇ ಸುಲಭವಾಗಿ ಗೊಬ್ಬರ ತಯಾರಿಸಲು ಸಹಾಯ ಮಾಡುವ ನೂರಾರು ವಿಧಾನಗಳಿವೆ, ಮಣ್ಣಿನ ಮಡಕೆಯಲ್ಲಿ ಕಾಂಪೋಸ್ಟ್ ಮಾಡುವ ಡೈಲಿ ಡಂಪ್ ವಿಧಾನ, ಪ್ಲಾಸ್ಟಿಕ್ ಡಬ್ಬದಲ್ಲಿ ಕಾಂಪೋಸ್ಟ್ ಮಾಡುವ ಬೊಕಾಶಿ ವಿಧಾನ, ಎರೆಹುಳುಗಳನ್ನುಪಯೋಗಿಸಿ ಗೊಬ್ಬರ ತಯಾರಿಸುವ ವಿಧಾನ, ಇನ್ನೂ ಹತ್ತು ಹಲವಾರು ವಿಧಾನಗಳಿವೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಫೇಸ್ ಬುಕ್ ಗುಂಪುಗಳಿವೆ. ಸೇರಿಕೊಳ್ಳಿ, ನೋಡಿ, ಕಲಿಯಿರಿ.
  • ಇದಲ್ಲದೆ ಹಸಿಕಸವನ್ನು ನೀವು ಬಿಬಿಎಂಪಿಗೂ ಕೊಡಬಹುದು, ನಿಮ್ಮ ಪ್ರದೇಶದಲ್ಲಿ ಇರುವ ವ್ಯವಸ್ಥೆಗನುಗುಣವಾಗಿ ಕಸದ ಆಟೋಗೆ ಅಥವಾ ತಳ್ಳುಗಾಡಿಗೆ ಇದನ್ನು ಕೊಡಬಹುದು.
  • ಒಣಕಸವನ್ನು ನಗರಪಾಲಿಕೆಯವರು ಸಂಗ್ರಹಿಸಿ ನಿಮ್ಮ ಸುತ್ತಮುತ್ತ ಇರಬಹುದಾದ ಒಣ ಕಸ ಸಂಗ್ರಹಣಾ ಕೇಂದ್ರಗಳಿಗೆ ಕೊಡುತ್ತಾರೆ. ಅಲ್ಲಿಂದ ಅದು ಪುನರುತ್ಪಾದನಾ ಘಟಕಗಳಿಗೆ ಹೋಗುತ್ತದೆ.
  • ಅಪಾಯಕಾರಿ ಕಸವು ಕೈಯಲ್ಲಿ ನೇರವಾಗಿ ಮುಟ್ಟಬಾರದ ವಸ್ತುಗಳನ್ನೊಳಗೊಂಡಿರುತ್ತದೆ. ಇದರಲ್ಲಿ ಕೆಲ ಭಾಗ ಅತಿ ಹೆಚ್ಚಿನ ಡಿಗ್ರಿ ಉಷ್ಣತೆಯಲ್ಲಿ ಸುಡಲ್ಪಡುತ್ತದೆ. ಮಿಕ್ಕಿದ್ದು ಸೂಕ್ತವಾದ ರೀತಿಯಲ್ಲಿ ವಿಲೇವಾರಿಗಾಗಿ ಕೊಡಲ್ಪಡುತ್ತದೆ.

ಯಾವುದೇ ಕಸವನ್ನು ಬಿಬಿಎಂಪಿಗೆ ಕೊಡುವಾಗ ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿ ಕೊಡಬೇಡಿ. ಹಾಗೆ ಕಟ್ಟಿರುವ ಕಸವನ್ನು ಬಿಚ್ಚಿ ಅದರಲ್ಲೇನಿದೆ ಎಂದು ನೋಡುವ ಕೆಲಸವನ್ನು ಯಾವ ಪೌರಕಾರ್ಮಿಕರೂ ಮಾಡುವುದಿಲ್ಲವಾದ್ದರಿಂದ ಅದು ಮಿಶ್ರಕಸವೆಂದು ಪರಿಗಣಿಸಲ್ಪಡುತ್ತದೆ, ಹಾಗೂ ನಗರದಾಚೆಗಿನ ಹಳ್ಳಿಗಳಲ್ಲಿರುವ ಕಸದ ಗುಂಡಿಗಳಿಗೆ ಹೋಗಿ ಸೇರುತ್ತದೆ. ಹೀಗೆ ನೀವು ಪರಿಸರನಾಶಕ್ಕೆನಿಮಗರಿವಿಲ್ಲದ ರೀತಿಯಲ್ಲಿ ಕೊಡುಗೆ ನೀಡಿರುತ್ತೀರಿ, ನಿಮಗೆ ಗೊತ್ತಿಲ್ಲದ ಯಾವುದೋ ಹಳ್ಳಿಯಲ್ಲಿನ ಜನರಿಗಾಗುವ ತೊಂದರೆಗಳಿಗೆ ಕಾರಣರಾಗಿರುತ್ತೀರಿ.

ಬೆಂಗಳೂರಿನ ಮನೋರಾಯನ ಪಾಳ್ಯದಲ್ಲಿ ಕಸದ ರಾಶಿ

ಇವಿಷ್ಟು ಮನೆಯಲ್ಲಿ ಮಾಡಬೇಕಾದ್ದಾಯಿತು. ಕಸ ಕಡಿಮೆ ಮಾಡಲು ಇನ್ನೇನು ಮಾಡಬಹುದು?

ತಿರಸ್ಕರಿಸಿ, ಮರುಬಳಕೆ ಮಾಡಿ ಮತ್ತು ಪುನರುತ್ಪಾದನೆಗೆ ಸಹಾಯ ಮಾಡಿ

  • ಕಂಡಲ್ಲಿ ಕಸವನ್ನು ಎಸೆಯುವ ಕೆಟ್ಟಹವ್ಯಾಸವನ್ನು ತ್ಯಜಿಸಿ. ಯಾವುದನ್ನು ಎಲ್ಲಿ ಹಾಕಬೇಕೋ ಅಲ್ಲೇ ಹಾಕಿ. ಈ ಶಿಸ್ತು ಕಸದಿಂದ ಮುಂದೆ ಆಗುವ ತೊಂದರೆಗಳನ್ನು ತಡೆಯುತ್ತದೆ.
  • ಏನೇ ಕೊಳ್ಳುವಾಗಲೂ ಅದರಿಂದ ಉತ್ಪಾದನೆಯಾಗುವ ಕಸ ಯಾವ ರೀತಿಯದು, ಎಷ್ಟಿರುತ್ತದೆ, ಅದನ್ನು ಏನು ಮಾಡಬಹುದು ಎಂದು ಮನಸ್ಸಿನಲ್ಲಿಟ್ಟುಕೊಂಡು ಕೊಳ್ಳುವ ಅಭ್ಯಾಸ ಇಟ್ಟುಕೊಳ್ಳಿ. ಈ ಅಭ್ಯಾಸದಿಂದ ನಿಮ್ಮ ಜೀವನದಲ್ಲಿ ನೀವು ಉತ್ಪಾದಿಸುವ ಅರ್ಧಕ್ಕರ್ಧ ಕಸವನ್ನು ನೀವು ಕಡಿಮೆ ಮಾಡಬಹುದು.
  • ಒಂದು ಸಲ ಬಳಸಿ ಬಿಸಾಕುವಂತಹ ಪ್ಲಾಸ್ಟಿಕ್ ಹಾಗೂ ಥರ್ಮಾಕೋಲ್ ಉಪಯೋಗಿಸಿ ತಯಾರಿಸುವ ಪ್ಲೇಟು, ಚಮಚ ಅಥವಾ ಕಪ್ಪುಗಳನ್ನು ಕೊಳ್ಳಲೇಬೇಡಿ.
  • ಮನೆಯಿಂದಾಚೆಗೆ ಹೋಗುವಾಗ ನಿಮ್ಮದೇ ಬಾಟಲಿಯಲ್ಲಿ ಕುಡಿಯುವ ನೀರು ಇಟ್ಟುಕೊಳ್ಳಿ. ಪ್ಯಾಕೇಜ್ ಮಾಡಿದ ಮಿನರಲ್ ನೀರಿನ ಬಾಟಲುಗಳನ್ನು ಕೊಳ್ಳುವ ಖರ್ಚು ಹಾಗೂ ಉತ್ಪಾದನೆಯಾಗುವ ಪ್ಲಾಸ್ಟಿಕ್ ಬಾಟಲಿ ಕಸ ಉಳಿತಾಯವಾಗುತ್ತದೆ.
  • ಮನೆಯಿಂದಾಚೆಗೆ ಹೋಗುವಾಗ ಬ್ಯಾಗಿನಲ್ಲಿ ನಿಮ್ಮದೇ ಸ್ಟೀಲ್ ಪ್ಲೇಟು, ಗ್ಲಾಸು, ಚಮಚ ಇಟ್ಟುಕೊಳ್ಳಿ. ಬೆಂಗಳೂರಿನಲ್ಲಿ ಇದೀಗ ವಿನೂತನ ಟ್ರೆಂಡ್. ಹೋದಲ್ಲಿ ನೀರು, ಚಹಾ, ಕಾಫಿ,ಜ್ಯೂಸ್ ಕುಡಿಯಲಿಕ್ಕಾಗಿ ಹಾಗೂ ಊಟತಿಂಡಿ ಮಾಡಲಿಕ್ಕಾಗಿ ಪ್ಲಾಸ್ಟಿಕ್ ಅಥವಾ ಇನ್ನಿತರ ಮರುಬಳಕೆ ಸಾಧ್ಯವಿಲ್ಲದ ವಸ್ತುಗಳನ್ನು ಉಪಯೋಗಿಸುವ ತಂಟೆ ತಪ್ಪುತ್ತದೆ.
  • ಹೊರಗೆ ಹೋದಲ್ಲಿ ಜ್ಯೂಸ್ ಕುಡಿಯಬೇಕಾದಲ್ಲಿ ಪ್ಲಾಸ್ಟಿಕ್ ಅಥವಾ ಪೇಪರ್ ಕಪ್ಪುಗಳ ಬದಲು ನಿಮ್ಮದೇ ಲೋಟ ಉಪಯೋಗಿಸಿ.
  • ಐಸ್ ಕ್ರೀಂ ತಿನ್ನುವಾಗ ಕೋನ್ ಐಸ್ ಕ್ರೀಂ ತಿನ್ನಿ, ಯಾಕೆಂದರೆ ಕೋನ್ ಕೂಡ ತಿನ್ನುವ ಪದಾರ್ಥವಾಗಿದ್ದು ಯಾವದೇ ರೀತಿಯ ಕಸ ಅದರಿಂದ ಉತ್ಪಾದನೆಯಾಗುವುದಿಲ್ಲ. ಮನೆಮಂದಿಯೆಲ್ಲಾ ಐಸ್ ಕ್ರೀಂ ಸವಿಯಬೇಕೆಂದಿದ್ದಲ್ಲಿ ಐಸ್ ಕ್ರೀಂ ಫ್ಯಾಮಿಲಿ ಪ್ಯಾಕುಗಳನ್ನು ತಂದು ಮನೆಯಲ್ಲಿ ಬಟ್ಟಲುಗಳಲ್ಲಿ ಹಾಕಿ ತಿನ್ನಿ.
  • ನಿಮಗೆ ಸಮಯವಿದ್ದಲ್ಲಿ ಮನೆಯಲ್ಲೇ ಐಸ್ ಕ್ರೀಂ ತಯಾರಿಸಿ ತಿನ್ನಿ, ಅದರ ರುಚಿಯೇ ಬೇರೆ.
  • ಹೊರಗೆ ಹೋಟೆಲುಗಳಿಗೆ ತಿನ್ನಲು ಹೋದಾಗ ಅಲ್ಲಿ ಯಾವ ರೀತಿಯ ಪರಿಕರಗಳನ್ನು ಉಪಯೋಗಿಸುತ್ತಾರೆಂದು ಗಮನಿಸಿ. ಮರುಬಳಕೆಯ ತಟ್ಟೆ-ಲೋಟಗಳನ್ನು ಉಪಯೋಗಿಸದಿದ್ದಲ್ಲಿ ಆ ಬಗ್ಗೆ ಅವರಿಗೆ ಸಲಹೆ ಕೊಡಿ.
  • ರಸ್ತೆಬದಿಯ ಪಾನಿಪೂರಿ-ಚಾಟ್ ಮಾರಾಟ ಮಾಡುವವರು ಬಳಸಿಬಿಸಾಕುವ ಪ್ಲಾಸ್ಟಿಕ್ ಪರಿಕರಗಳನ್ನು ಉಪಯೋಗಿಸುತ್ತಿದ್ದಲ್ಲಿ ಅವರಿಗೆ ಸಾವಯವ ಪದಾರ್ಥಗಳಿಂದ ತಯಾರಿಸಲ್ಪಟ್ಟ ಬಾಳೆ ಎಲೆ ದೊನ್ನೆ, ಅಡಿಕೆ ಪಟ್ಟಿ ತಟ್ಟೆಗಳು ಇತ್ಯಾದಿಗಳನ್ನು ಉಪಯೋಗಿಸುವಂತೆ ಸಲಹೆ ಕೊಡಿ.
  • ಮರುಬಳಕೆಯ ವಸ್ತುಗಳನ್ನು ಉಪಯೋಗಿಸುವ ಹೋಟೆಲುಗಳು ಅಥವಾ ಚಾಟ್ ಮಾರಾಟಗಾರರು ಕಂಡಾಗ ಅವರ ಪ್ರಯತ್ನವನ್ನು ಗುರುತಿಸಿ ಅದರ ಬಗ್ಗೆ ಅವರನ್ನು ಪ್ರಶಂಸಿಸಿ.
  • ಮನೆಯಲ್ಲಿ ಸಮಾರಂಭಗಳಿರುವಾಗ ಪ್ಲಾಸ್ಟಿಕ್ ಗಿಫ್ಟ್ ಪ್ಯಾಕುಗಳ ಬದಲು ಆದಷ್ಟು ಪೇಪರ್ ಅಥವಾ ಬಟ್ಟೆಯ ಪ್ಯಾಕಿಂಗ್ ಉಪಯೋಗಿಸಿ.
  • ಮನೆಗೆ ಸಾಮಾನು ತಂದಾಗ ಅಕಸ್ಮಾತ್ ಪ್ಲಾಸ್ಟಿಕ್ ಕೈಚೀಲದಲ್ಲಿ ತಂದಲ್ಲಿ ಅದನ್ನು ಖಾಲಿ ಮಾಡಿ ತೊಳೆದಿಟ್ಟು ಹಾಳಾಗುವಷ್ಟು ಕಾಲ ಮರುಬಳಕೆ ಮಾಡಿ.
  • ತರಕಾರಿ ಅಥವಾ ಸಾಮಾನು ತರಲು ಹೋಗುವ ಮುನ್ನ ಬೇಕಾದ ವಸ್ತುಗಳ ಪಟ್ಟಿ ಮಾಡಿಕೊಳ್ಳಿ, ಅದಕ್ಕೆ ಎಷ್ಟು ಬೇಕೋ ಅಷ್ಟು ಮರುಉಪಯೋಗಿಸಬಹುದಾದ ಬ್ಯಾಗುಗಳನ್ನು ಕೈಲಿ ಹಿಡಿದುಕೊಂಡು ಹೋಗಿ. ಆಗ ಅವುಗಳನ್ನು ಪ್ಯಾಕೇಜ್ ಮಾಡಲು ಹೊಸ ಪ್ಲಾಸ್ಟಿಕ್ ಚೀಲಗಳನ್ನು ಉಪಯೋಗಿಸುವುದು ತಪ್ಪುತ್ತದೆ.
  • ದಯವಿಟ್ಟು ಪ್ಲಾಸ್ಟಿಕ್ ಚೀಲದಲ್ಲಿ ತಿಂದುಳಿದ ಆಹಾರವನ್ನು ಕಟ್ಟಿ ಬಿಸಾಕಬೇಡಿ. ನಾಯಿ, ಹಸು ಮತ್ತಿತರ ಪ್ರಾಣಿಗಳು ಹಾರಕ್ಕೋಸ್ಕರ ಅದನ್ನು ಹರಿಯಲು ಯತ್ನಿಸಿ ಚೀಲವನ್ನೇ ತಿನ್ನುತ್ತವೆ, ಮತ್ತು ಅದರಿಂದಲೇ ಸಾಯುತ್ತವೆ. ದೊಡ್ಡದೊಡ್ಡ ನಗರಗಳಲ್ಲಿ ಈರೀತಿ ಕಟ್ಟಿಟ್ಟ ಪ್ಲಾಸ್ಟಿಕನ್ನು ಹೆಗ್ಗಣಗಳು ಅಥವಾ ನಾಯಿಗಳು ಎಳೆದುಕೊಂಡು ಹೋಗಿ ಮಳೆನೀರಿನ ಚರಂಡಿಗಳಲ್ಲಿ ಬಿಸಾಕುತ್ತವೆ, ಇದರಿಂದ ನೀರು ಹಾದುಹೋಗುವ ದಾರಿಯು ಕಟ್ಟಿಕೊಂಡು ಚೆನ್ನೈಯಲ್ಲಿ ಇತ್ತೀಚೆಗೆ ಆದಂತಹ ಪ್ರವಾಹದ ಅನಾಹುತಗಳು ಉಂಟಾಗುವ ಸಾಧ್ಯತೆಗಳಿದೆ. ಇದ್ಯಾವುದೂ ಆಗಿಲ್ಲವೆಂದರೂ ಆ ಪ್ಲಾಸ್ಟಿಕ್ ಹೋಗಿ ಕಸದ ಗುಂಡಿಗಳನ್ನು ಸೇರಿ ಪರಿಸರ ನಾಶಕ್ಕೆ ಕೊಡುಗೆಯಾಗುತ್ತದೆ.
  • ನೀವು ಜಗಿದು ಬಿಸಾಕುವ ಚ್ಯೂಯಿಂಗ್ ಗಮ್ ವರ್ಷಾನುಗಟ್ಟಲೆ ಹಾಗೇ ಇರುತ್ತದೆ, ಹಾಗಾಗಿ ಅದನ್ನು ಕೊಳ್ಳುವುದು, ಜಗಿದು ಬಿಸಾಕುವುದು ನಿಲ್ಲಿಸಿ.

ನಿಮ್ಮ ನಗರಪಾಲಿಕೆಯಲ್ಲಿ ಕಸದ ವಿಲೇವಾರಿಗೆ ಏನು ವ್ಯವಸ್ಥೆಯಿದೆ ಎಂಬುದನ್ನು ಗಮನಿಸಿ. ಒಂದು ವೇಳೆ ಅಲ್ಲಿ ಕಸದ ವಿಲೇವಾರಿಗೆ ವೈಜ್ಞಾನಿಕ ವಿಧಾನಗಳ್ಯಾವುವೂ ಅನುಸರಿಸಲ್ಪಡದೇ ಇದ್ದಲ್ಲಿ ನೀವೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತಾಡುವ ಮೂಲಕ ಸೂಕ್ತರೀತಿಯ ವಿಲೇವಾರಿಗೆ ಮುನ್ನುಡಿ ಬರೆಯಬಹುದು. ಒಂದು ವೇಳೆ ನೀವು ಬೆಂಗಳೂರಿನಲ್ಲೇ ಇರುವವರಾದರೆ ನೀವು ಇರುವ ಜಾಗದಲ್ಲಿ ಸೂಕ್ತವಾಗಿ ವಿಲೇವಾರಿ ಆಗದೇ ಇದ್ದ ಪಕ್ಷದಲ್ಲಿ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ  (22660000 / Whatsapp – 9480685700), ಹಾಗೂ ಈ ಲೇಖನದ ಕೊನೆಯಲ್ಲಿ ನಿಮ್ಮ ವಾರ್ಡ್, ಅಲ್ಲಿರುವ ಸಮಸ್ಯೆಗಳನ್ನು ಬರೆದು ಕಮೆಂಟ್ ಮಾಡಿ.

Related Articles

How to segregate waste in offices?
Understanding how to segregate waste
How to segregate waste in apartments?

Comments:

  1. naveen pg says:

    ಒಳ್ಳ ಮಾಹಿತಿ.. ಇನ್ನಸ್ಟು ಬರೀರಿ…

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Similar Story

Event alert: Road to Environmental Justice

The annual DLN Rao Foundation Seminar will host Justice Abhay S Oka of the Supreme Court as the keynote speaker.

The annual DLN Rao Foundation Seminar, titled Road to Environmental Justice, will be held on April 13, 2024, Saturday, from 3 30 pm to 5 30pm at the NGO Hall, Cubbon Park. Citizen Matters is proud to be the media partner for this event. The seminar will host Supreme Court Justice, Abhay S Oka and Karnataka High Court Justice Sunil Dutt Yadav. Justice Abhay Oka will deliver the Keynote address. He is well known to citizens in Bengaluru from his tenure at the Karnataka HIgh Court. He pronounced landmark judgements and orders to protect the city’s lakes from encroachments, reiterated…

Similar Story

Unplanned growth, flawed notification endanger Delhi wetlands

Increased public involvement and lessons from successful restoration attempts can help revive the crucial wetlands under threat in the city.

Have you been to the Surajpur wetland, near Surajpur village in Gautam Budh Nagar district? Located in the midst of an expansive industrial city under the administrative purview of the Greater Noida Development Authority, it reveals itself as a mosaic of a sprawling lake, towering trees and thousands of birds, many flying in from distant lands. As you enter the wetland, the guards tell you not to go beyond the second viewpoint. It is untamed territory, the domain of many wild animals, they warn.  However, all has not been well in this sanctuary of nature. In January 2024, the Uttar…